ದಾವಣಗೆರೆ, ಜ.6- ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಸದುದ್ಧೇಶದಿಂದ ಶಾಲೆ ತೆರೆಯುವ ಮೂಲಕ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ ಮತ್ತು ದೇಶದ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ ಎಂದು ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿಗಳೂ, ಹಿರಿಯ ವಕೀಲರೂ ಆದ ಎಲ್.ಹೆಚ್. ಅರುಣ್ ಕುಮಾರ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಸ್ಲಂ ಜನಾಂದೋಲನ ಕರ್ನಾಟಕದ 12 ನೇ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆಯವರ 191 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಸಮುದಾಯ ಮತ್ತು ಯುವಜನತೆ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ನಿಸ್ವಾರ್ಥ ಸೇವೆ, ತ್ಯಾಗ ಮನೋಭಾವನೆ ಮತ್ತು ಸತತ ಪರಿಶ್ರಮದ ಮೂಲಕ ಶೋಷಿತ, ಬಡವರ್ಗದ ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಯಿತು ಎಂದರು.
ಅನೇಕ ವಿರೋಧಗಳ ನಡುವೆಯೂ 18 ಶಾಲೆ ಗಳನ್ನು ತೆರೆಯುವ ಮೂಲಕ ಉಚಿತ ಶಿಕ್ಷಣ ನೀಡಿ, ಮಹಿಳೆಯರು ಎಲ್ಲಾ ರಂಗಗಳಲ್ಲೂ ಪ್ರಗತಿ ಸಾಧಿ ಸಲು ಮುನ್ನುಡಿ ಬರೆದ ಕೀರ್ತಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಸೇರುತ್ತದೆ ಎಂದು ಹೇಳಿದರು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಷ್ಟೇ ಸರಿ ಸಮನಾಗಿ ಪ್ರಗತಿ ಸಾಧಿಸಲು ಸಾವಿತ್ರಿ ಬಾಯಿ ಫುಲೆ ಮಾಡಿದ ಅಕ್ಷರ ಕ್ರಾಂತಿಯೇ ಕಾರಣವಾಗಿದೆ. ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವಂತಾಗಬೇಕೆಂದು ಒತ್ತಾಯಿಸಿದರು.
ನಿವೃತ್ತ ಇಂಜಿನಿಯರ್ ಎಸ್.ಎಲ್. ಆನಂದಪ್ಪ ಮಾತನಾಡಿ, ಮಹಿಳಾ ಸಮಾನತೆ ಮತ್ತು ಮಹಿಳಾ ಶಿಕ್ಷಣಕ್ಕೆ ಸಾವಿತ್ರಿ ಬಾಯಿ ಫುಲೆ ಹಾಗೂ ಬಸವಣ್ಣನ ವರು ನೀಡಿದ ಕೊಡುಗೆ ಅನನ್ಯವಾದುದು ಎಂದರು.
ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಸ್ಲಂ ಜನರ ಏಳಿಗಾಗಿ ರೂಪಿಸಿದೆ. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಉಪಯುಕ್ತ ಯೋಜನೆಗಳು ಸಮರ್ಪಕವಾಗಿ ದೊರೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಲಂ ಜನಾಂದೋಲನ – ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತ ನಾಡಿ, ಬಹು ದಿನಗಳಿಂದಲೂ ಸ್ಲಂ ಜನಾಂದೋಲನ ಕರ್ನಾಟಕ ಹೋರಾಟ ಮಾಡುತ್ತಾ ಬಂದಿದ್ದರೂ ಇನ್ನೂ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿರುವುದು ವಿಷಾದದ ಸಂಗತಿ ಎಂದರು.
ಸಂಘಟನೆಯ ಗೌರವಾಧ್ಯಕ್ಷ ಶಬ್ಬೀರ್ ಸಾಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಟ್ಟಿಹಳ್ಳಿ ಮಾರುತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರವಿಕುಮಾರ್ ಉಪನ್ಯಾಸ ನೀಡಿದರು. ಡಿ.ಎಸ್-4 ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ಕ್ರಾಂತಿಗೀತೆ ಹಾಡಿದರು. ಯಾಸ್ಮಿನ್ ಮತ್ತಿತರರು ಉಪಸ್ಥಿತರಿದ್ದರು.