ದಾವಣಗೆರೆ,ಜ.6- ಓಮಿಕ್ರಾನ್ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಮಾಡಿರುವ ವಾರಾಂತ್ಯದ ಕರ್ಫ್ಯೂ ಕ್ರಮವನ್ನು ಖಂಡಿಸಿರುವ ನಗರಸಭೆ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳು ರಾಜಕೀಯ ದುರುದ್ಧೇಶದಿಂದ ಕೂಡಿವೆ ಎಂದು ದೂರಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ಪಾದಯಾತ್ರೆಯನ್ನು ತಡೆಯುವ ದುರುದ್ಧೇಶದಿಂದ ಓಮಿಕ್ರಾನ್ ನೆಪದಲ್ಲಿ ಸರ್ಕಾರ ಕರ್ಫ್ಯೂ ವಿಧಿಸಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಕೊರೊನಾ ತಡೆಗಟ್ಟಲು ತಿಂಗಳುಗಂಟಲೇ ಕರ್ಫ್ಯೂ ವಿಧಿಸಿದ ಪರಿಣಾಮ ಜನ ಸಾಮಾನ್ಯರು, ವ್ಯಾಪಾರಸ್ಥರು, ಬಡವರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು. ಅದನ್ನು ಸುಧಾರಿಸಿಕೊಳ್ಳುವ ಹಂತದಲ್ಲಿ ಓಮಿಕ್ರಾನ್ ನೆಪವೊಡ್ಡಿ ಕರ್ಫ್ಯೂ ವಿಧಿಸಿರುವ ಸರ್ಕಾರದ ಕ್ರಮ ಸಮಂಜಸವಲ್ಲ ಎಂದು ಅವರು ತಿಳಿಸಿದ್ದಾರೆ.