ಹರಪನಹಳ್ಳಿ, ಜ.6- ರಾಜ್ಯ ಸರ್ಕಾರ ಆದೇಶಿಸಿರುವ ವೀಕೆಂಡ್ ಕರ್ಪ್ಯೂವನ್ನು ಕಡ್ಡಾಯವಾಗಿ ಪಾಲಿಸಿ ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಸಹಕರಿಸಿ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ. ಶ್ರವಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ಮೂರನೇ ಅಲೆ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿನ ಔಷಧಿ, ಆಕ್ಸಿಜನ್, ಹಾಸಿಗೆ, ವೈದ್ಯರು ಹಾಗೂ ಸಿಬ್ಬಂದಿಗಳ ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು, ರಾಜ್ಯದಲ್ಲಿ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಔಷಧಿ, ಆಕ್ಸಿಜನ್, ಹಾಸಿಗೆ, ವೈದ್ಯರು ಹಾಗೂ ಸಿಬ್ಬಂದಿಗಳ ಮಾಹಿತಿ ಪಡೆಯಲು ಭೇಟಿ ನೀಡಿದ್ದು ಜಿಲ್ಲೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಅನ್ವಯವಾಗಲಿದ್ದು, ರಾಲಿ, ಪ್ರತಿಭಟನೆ, ಮದುವೆ ಸಮಾರಂಭಗಳಿಗೆ ಕೋವಿಡ್ ನಿಯಮ ಅನ್ವಯವಾಗಲಿದೆ ಎಂದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕೊರತೆ ಇರುವ ಕಾರಣ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಹೆಚ್.ಜಿ.ಚಂದ್ರಶೇಖರಯ್ಯ, ತಹಶೀಲ್ದಾರ್ ಎಲ್.ಎಂ.ನಂದೀಶ್, ತಾಲ್ಲೂಕು ವೈದ್ಯಾಧಿಕಾರಿ ಹಾಲಸ್ವಾಮಿ ಹಾಗೂ ಆಡಳಿತಾಧಿಕಾರಿ ಶಿವಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.