ಕೊರೊನಾ ತಡೆಯಲು ಚುರುಕಾಗಿ

ಅಧಿಕಾರಿಗಳು, ಸಿಬ್ಬಂದಿಗಳಿಗೆ ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಸೂಚನೆ

ಹರಿಹರ, ಜ5 – ಕೊರೊನಾ ಮೂರನೇ ಅಲೆ ತಡೆಗಟ್ಟಲು ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುರುಕಿನಿಂದ ತಮ್ಮ ಜವಾಬ್ದಾರಿ ನಿಭಾಯಿಸುವಂತೆ ತಹಶೀಲ್ದಾರ್‌ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕೊರೊನಾ ರೋಗವನ್ನು ತಡೆಗಟ್ಟಲು ವಿವಿಧ ಇಲಾಖಾವಾರು ಅಧಿಕಾರಿಗಳ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಹಳ ಮುತುವರ್ಜಿಯಿಂದ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿದ ಪರಿಣಾಮವಾಗಿ ಒಂದು ಮತ್ತು ಎರಡನೇ ಅಂತದ ಕೊರೊನಾ ನಿಯಂತ್ರಣ ತರುವುದಕ್ಕೆ ಸಾಧ್ಯವಾಯಿತು. ಈಗ ಮೂರನೇ ಅಲೆಯು ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೇಳಿದರು.

ಸಾರ್ವಜನಿಕರು ಸಹ ಜಾಗೃತರಾಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಓಡಾಡಬೇಕು. ಸಭೆ ಸಮಾರಂಭಗಳಲ್ಲಿ ಅಂತರವನ್ನು ಕಾಯ್ದುಕೊಳ್ಳಬೇಕು. ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಓಡಾಡಬೇಕು ಎಂದು ತಹಶೀಲ್ದಾರ್ ಹೇಳಿದರು.

ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ ಮಾತನಾಡಿ, ಕಸದ ಆಟೋದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಮನೆಗಳಿಗೆ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ಗುರುವಾರ ಬೆಳಗ್ಗೆ ನಗರದ ತರಕಾರಿ, ಹಣ್ಣು, ಲಾಡ್ಜ್, ಮಹಲ್, ಕಲ್ಯಾಣ ಮಂಟಪ, ಚಿಕನ್, ಮಟನ್, ಸೇರಿದಂತೆ ಹಲವು ವ್ಯಾಪಾರಸ್ಥರ ಸಭೆಯನ್ನು ಏರ್ಪಡಿಸಿ ಅವರಿಗೆ ಸರ್ಕಾರದ ಕಾರ್ಯಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದಕ್ಕೆ ಸಭೆಯನ್ನು ಮಾಡುವುದಾಗಿ ಹೇಳಿದರು.

ತಾಲ್ಲೂಕು ಪಂಚಾಯ್ತಿ ಇ.ಒ. ಗಂಗಾಧರನ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನ ರೋಗವು ಹೆಚ್ಚಾಗಿ ಹರಡದಂತೆ ತಡೆಯಲು ಪಿಡಿಓ ಅವರಿಗೆ ಮತ್ತು ಗ್ರಾ.ಪಂ. ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ಪ್ರತಿನಿತ್ಯವೂ ಆಶಾ ಕಾರ್ಯಕರ್ತರೊಂದಿಗೆ ತಪಾಸಣೆ ಮಾಡಲಾಗುತ್ತದೆ. ತಾಲ್ಲೂಕಿನ ಹೈಸ್ಕೂಲ್ ಮತ್ತು ಪಿ.ಯು.ಸಿ ಓದುವ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಈಗಾಗಲೇ ಶೇ. 64 ರಷ್ಟು ಹಾಕಲಾಗಿದೆ ಎಂದು ಹೇಳಿದರು.

ಸಿಪಿಐ ಸತೀಶ್ ಕುಮಾರ್ ಮಾತನಾಡಿ, ಕೊರೊನಾ ಮಾರ್ಗಸೂಚಿ ಕುರಿತು ಜಾಗೃತಿ ಮೂಡಿಸಲಾಗುವುದು. ಮುಂದಿನ ದಿನಗಳಲ್ಲಿ ದಂಡವನ್ನು ಹಾಕುವುದಕ್ಕೆ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹನುಮಾನಾಯ್ಕ್ ಮಾತನಾಡಿ, ಕೊರೊನ ನಿಯಂತ್ರಣ ಸಾಧಿಸಲು ಬೇಕಾಗುವ ಔಷಧೀಯ ಸೌಲಭ್ಯಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗಳ ಕೊರತೆ ತಡೆಯಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ಕೃಷಿ ಇಲಾಖೆಯ ನಾರನಗೌಡ, ಅಬಕಾರಿ ಇಲಾಖೆಯ ಶೀಲಾ, ತೋಟಗಾರಿಕೆ  ಇಲಾಖೆಯ ರೇಖಾ, ಸಿಡಿಪಿಓ ನಿರ್ಮಲ, ಎಪಿಎಂಸಿ ವಿದ್ಯಾ, ಲೋಕೋಪಯೋಗಿ ಇಲಾಖೆಯ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ನಾಸೀರ್ ಉದ್ದೀನ್‌ , ಹಿಂದುಳಿದ ವರ್ಗ ಪರವಿನ್ ಬಾನು ಮತ್ತಿತರರು ಹಾಜರಿದ್ದರು.

error: Content is protected !!