ಜಗಳೂರು : ಬುದ್ಧ, ಬಸವ, ಅಂಬೇಡ್ಕರ್ ಶಿಲಾಮೂರ್ತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವ್ಯಾಕುಲತೆ
ಜಗಳೂರು, ಜ.5- ಶತಮಾನಗಳು ಉರುಳಿದರೂ ಸಮಾಜದಲ್ಲಿ ಅಸಮಾನತೆ, ಜಾತಿ ಭೇದ ಮುಂತಾದ ರೋಗಗಳು ಸಮಾಜವನ್ನು ಕಾಡುತ್ತಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅಂತಹವರ ಬೆಳಕಿನಿಂದ ಈ ರೋಗ ಪೀಡಿತ ಸಮಾಜಕ್ಕೆ ಮುಕ್ತಿ ಸಿಗಬಲ್ಲದು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯರ್ಲಕಟ್ಟೆ ಗ್ರಾಮದಲ್ಲಿ ಏರ್ಪಾಡಾಗಿದ್ದ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಶಿಲಾಮೂರ್ತಿಗಳ ಲೋಕಾರ್ಪಣೆ ನೆರವೇರಿಸಿ ಶ್ರೀಗಳು ಮಾತನಾಡಿದರು.
ಸಮಾಜದಲ್ಲಿ ಬಹುಸಂಖ್ಯಾತರ ಹೆಸರಿ ನಲ್ಲಿ ಹಿಡಿಯಷ್ಟು ಜನ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಕನಿಷ್ಟ ತಲೆ ಮೇಲೊಂದು ಸೂರು, ತೊಡಲಿಕ್ಕೊಂದು ಬಟ್ಟೆ, ದುಡಿಯಲಿಕ್ಕೊಂದು ಕಾಯಕ ಒದಗಿಸಲಾರದ ಈ ನಾಡು ದ್ವೇಷಾಸೂಯೆಗಳನ್ನು ಮಾತ್ರ ಮುಂದಿನ ಶತಮಾನಗಳಿಗೂ ಆಗುವಷ್ಟು ಬಿತ್ತುತ್ತಿದೆ ಎಂದರು.
ಇದು ಬಹಳ ಆತಂಕದ ವಿಚಾರ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಮನುಷ್ಯನ ದುರಾಸೆ, ದ್ವೇಷ ಮತ್ತು ಹಿಂಸೆಯ ನಿರರ್ಥಕತೆಯನ್ನು ಸಾರಿದ ಬುದ್ಧ ಹಾಗೂ 9 ಶತಮಾನಗಳ ಹಿಂದೆ ಅನುಭವ ಮಂಟಪದ ಮೂಲಕ ವೈಚಾರಿಕ ನೆಲೆಗಟ್ಟಿನಲ್ಲಿ ಕಾಯಕ ಆಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ, ಶೋಷಿತರು ಹಾಗೂ ನೊಂದವರಿಗೆ ಆತ್ಮವಿಶ್ವಾಸದ, ಸ್ವಾಭಿಮಾನದ ಬದುಕನ್ನು ಸಂವಿಧಾನದ ಮೂಲಕ ಕಟ್ಟಿಕೊಟ್ಟ ಡಾ. ಅಂಬೇಡ್ಕರ್ ಅವರು ಇಲ್ಲಿ ಸಂಗಮಿಸಿರುವುದು ಅರ್ಥಪೂರ್ಣವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಡಾ. ಹನುಮಂತಪ್ಪ, ವಕೀಲ ಡಿ. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜಪ್ಪ, ಅಂಜಿನಪ್ಪ ಇದ್ದರು.