ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ದಾವಣಗೆರೆ, ಜ.5- ಕನ್ನಡಪರ ಹೋರಾಟಗಾರ ದಿ. ಮು. ಗೋವಿಂದರಾಜ್ ಅವರ ಭಾವಚಿತ್ರವನ್ನು ಹರಿದು ಹಾಕುವ ಮೂಲಕ ಅಪಮಾನ ಮಾಡಿರುವ ಕೃತ್ಯವನ್ನು ಖಂಡಿಸಿ, ನಗರದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ತೆರಳಿದ ಪದಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಹಾಗೂ ಆರಕ್ಷಕ ನಿರೀಕ್ಷಕ ಸುರೇಶ್ ಸಗರಿ ಅವರುಗಳಿಗೆ ಮನವಿ ಸಲ್ಲಿಸಿದರು.
ಡಾ. ಮೋದಿ ವೃತ್ತದ ಬಳಿ ನಾಡು – ನುಡಿಗೆ ಶ್ರಮಿಸಿದ ಹಲವಾರು ಹೋರಾಟಗಾರರ ಭಾವಚಿತ್ರಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಹಾಕಲಾಗಿದ್ದು, ಈ ಮಹನೀಯರ ಪೈಕಿ ಕನ್ನಡಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಮು. ಗೋವಿಂದರಾಜ್ ಭಾವಚಿತ್ರವನ್ನು ನಾಡ ದ್ರೋಹಿಗಳು ಹರಿದು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಹೀಗೆ ನಗರದಲ್ಲಿ ಅಶಾಂತಿಯನ್ನು ಉಂಟು ಮಾಡುವ ನಾಡ ದ್ರೋಹಿಗಳನ್ನು ತಕ್ಷಣ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಸಿಸಿಟಿವಿ ಪರಿಶೀಲಿಸಿ ಕಿಡಿಗೇಡಿಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರವೇ ಹೋರಾಟಕ್ಕಿಳಿ ಯಲಿದೆ ಎಂದು ರಾಮೇಗೌಡ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆ.ಜಿ. ಬಸವರಾಜ್, ಸಂತೋಷ್, ಮಹೇಶ್ವರಪ್ಪ, ಮಂಜುಳ ಮಾಂತೇಶ್, ಸಾಕಮ್ಮ, ಎಂ.ಡಿ. ರಫೀಕ್, ಜಬಿವುಲ್ಲಾ, ಅಯೂಬ್, ಪರಮೇಶ್, ಬಸವರಾಜು, ಕಾಲ್ ಚೌದ್ರಿ ಇಬ್ರಾಹಿಂ , ಸಂಜು, ದೀರೇಂದ್ರ ತುಳಸಿರಾಮ್, ರಾಕೇಶ್, ನವೀನ್, ದಾದಾಪೀರ್, ಪ್ರಕಾಶ್ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.