50 ಕ್ವಿಂ. ರಾಗಿ ಖರೀದಿಗೆ ಆಗ್ರಹ

ಜಗಳೂರಿನಲ್ಲಿ ರೈತ ಸಂಘ-ಹಸಿರು ಸೇನೆಯಿಂದ ಪ್ರತಿಭಟನೆ

ಜಗಳೂರು, ಡಿ.4- ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ರಾಗಿಯನ್ನು ಪ್ರತಿ ರೈತರಿಗೆ 20 ಕ್ವಿಂಟಾಲ್  ಬದಲಿಗೆ 50 ಕ್ವಿಂಟಾಲ್ ವರೆಗೆ  ಖರೀದಿಸಬೇಕು ಎಂದು ಒತ್ತಾಯಿಸಿ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಆಡಳಿತ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತ,  ಅಂಬೇಡ್ಕರ್ ವೃತ್ತದ ಮೂಲಕ ತಹಶೀ ಲ್ದಾರ್ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ಕಳೆದ ಸಾಲಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ 50 ಕ್ವಿಂಟಾಲ್ ವರೆಗೆ ಖರೀದಿ ಮಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಕೇವಲ 20 ಕ್ವಿಂಟಾಲ್ ಮಾತ್ರ ಖರೀದಿಗೆ ಸರ್ಕಾರ  ನಿಗದಿ ಮಾಡಿದ್ದು, ಸಾಗಾಣಿಕೆ ವೆಚ್ಚ ಸೇರಿದಂತೆ ರೈತರಿಗೆ ಅನಾನುಕೂಲವಾಗಿದೆ. ಕೂಡಲೇ 50 ಕ್ವಿಂಟಾಲ್ ನಿಗದಿಗೊಳಿಸಿ ಕ್ವಿಂಟಾಲ್‌ಗೆ   500 ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ಪಧಾದಿಕಾರಿಗಳಾದ ಗಂಗಾಧರಪ್ಪ, ಸತೀಶ್, ರಾಜು, ಕೆಂಚಪ್ಪ, ಪ್ರಹ್ಲಾದಪ್ಪ, ಏಕಾಂತಪ್ಪ, ಗುರುಮೂರ್ತಿ, ರಮೇಶ್, ಪರಶರಾಮಪ್ಪ, ಚಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!