ಚಿತ್ರದುರ್ಗ, ಜ.5 – ಮುಪ್ಪು ಮರಣದ ಮಹಾದ್ವಾರ. ಅದು ಅನಿ ವಾರ್ಯ ಹಾಗೂ ನಿಸರ್ಗದ ನಿಯ ಮವೂ ಕೂಡ. ಹಾಗಾಗಿ ಸಮಯವನ್ನು ಬಳಸಿಕೊಂಡು ಸಾಧನೆ ಮಾಡುತ್ತಾ ಸಾಗಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದಲ್ಲಿ ಮೊನ್ನೆ ಏರ್ಪಾಡಾಗಿದ್ದ ಜಮುರಾ ರಾಷ್ಟ್ರೀಯ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು. ಜನ ವ್ಯತ್ಯಾಸ ಮಾಡ ಬಹುದು. ಆದರೆ, ಮರಣ ವ್ಯತ್ಯಾಸ ಮಾಡುವುದಿಲ್ಲ. ನಶ್ವರವಾದ ಈ ಶರೀರವನ್ನು ನಾವೆಲ್ಲ ಪಡೆದುಕೊಂಡಿದ್ದೇವೆ. ಮಾನವ ಬದುಕಿನಲ್ಲಿ ಸಾಧನೆ ಶಾಶ್ವತವಾದುದು. ವಿಚಾರಗಳಲ್ಲಿ ಅಪ್ರತಿಮವಾದ ಶಕ್ತಿ ಇದೆ. ವಿಚಾರಗಳು ಜಗತ್ತನ್ನು ಆಳುತ್ತವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, ನಾಟಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಶ್ರೀಮಠದ ಗೌರವ ಸ್ವೀಕರಿಸಿ ಮಾತನಾಡಿದ ರಂಗ ಸಂಘಟಕ ಗುಂಡಣ್ಣ ಚಿಕ್ಕಮಗಳೂರು, ರಂಗಭೂಮಿ ಜಾತಿ, ಮತಗಳ ಗೋಡೆಗಳನ್ನು ಕೆಡವಿ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿದರು. ಪಟೇಲ್ ಶಿವಕುಮಾರ್ ವೇದಿಕೆಯಲ್ಲಿದ್ದರು.
ಮಹಂತೇಶ್ ರಾಮದುರ್ಗ ರಚನೆ ಹಾಗು ನಿರ್ದೇಶನದ `ಸೋರುತಿಹುದು ಸಂಬಂಧ’ ನಾಟಕವನ್ನು ಜಮುರಾ ಸುತ್ತಾಟ ತಂಡದವರು ಮನೋಜ್ಞವಾಗಿ ಅಭಿನಯಿಸಿದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಕೆ.ಎಂ. ವೀರೇಶ್ ಸ್ವಾಗತಿಸಿದರು. ಜಂಬುನಾಥ್ ನಿರೂಪಿಸಿದರು.