ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ

ಜಗಳೂರಿನಲ್ಲಿ ಸೋಮಶೇಖರ್

ಜಗಳೂರು, ಡಿ. 4- ಸೋಲು ಗೆಲುವು ಸಹಜ. ನಾನು ಸೋಲನ್ನು ಸವಾಲನ್ನಾಗಿ ಸ್ವೀಕರಿಸಿದ್ದೇನೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಎಂ.ಸೋಮಶೇಖರ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಛೇರಿಗೆ ಆಗಮಿಸಿ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಯಲ್ಲಿ ಮತದಾನ ಮಾಡಿದ ಮತದಾರರಿಗೆ ಹಾಗೂ ಕಾರ್ಯಕರ್ತರು ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ಮುಂದಿನ ಚುನಾವಣೆಗಳ ಆಸೆ ಆಕಾಂಕ್ಷಿ ಹೊತ್ತು ಆಗಮಿಸಿಲ್ಲ. ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮತದಾರ ರಿಗೆ ಹಾಗೂ  ಕಾರ್ಯಕರ್ತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಮಿಸಿದ್ದೇನೆ. ಗೆಲುವು ಸಾಧಿಸಿದವರು ಇಂದಿಗೂ ಹಿಂತಿರುಗಿ ಕ್ಷೇತ್ರಕ್ಕೆ ಬಂದಿಲ್ಲ.   ನಾನು ಸೋತರೂ ಕ್ಷೇತ್ರದಲ್ಲಿ ಸದಾ ಪಕ್ಷದ ಕಾರ್ಯಕ್ರಮಗಳಲ್ಲಿ ತಮ್ಮ ಜೊತೆಗಿದ್ದು ಬೆಂಬಲಿಸುವೆ ಎಂದರು.

ಚಿತ್ರದುರ್ಗ ಕ್ಷೇತ್ರದ ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಲೆ ಇಳಿಮುಖವಾಗುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಇತ್ತೀಚೆಗೆ ನಡೆದ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ. ಸೋಮಶೇಖರ್ ಅವರು ಸೋಲು ಅನುಭವಿಸಿ ದ್ದರೂ ಸದಾ ತಮ್ಮ ಧ್ವನಿಯಾಗಿರುತ್ತಾರೆ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸೋಲಿನ ನಂತರವೂ ಸ್ವಯಂ ಪ್ರೇರಿತವಾಗಿ ತಾಲ್ಲೂಕಿಗೆ ಆಗಮಿಸಿ ಮತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಪಕ್ಷದ ಕಾಳಜಿಯನ್ನು ಬಿಂಬಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಆನ್ ಲೈನ್ ಸದಸ್ಯತ್ವ ನೊಂದಣಿ ಅಭಿಯಾನ‌ ಶೀಘ್ರ ಪೂರ್ಣಗೊಳಿಸಲು ನೋಂದಣಿದಾರರಿಗೆ ಸಲಹೆ ನೀಡಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಕೆ.ಪಿ.ಪಾಲಯ್ಯ,  ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕಮ್ಮತ್ತಹಳ್ಳಿ ಮಂಜುನಾಥ್, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಯು.ಜಿ.ಶಿವಕುಮಾರ್, ಪ.ಪಂ ಸದಸ್ಯರಾದ ರವಿಕುಮಾರ್, ಶಕೀಲ್ ಅಹಮ್ಮದ್, ರಮೇಶ್ ರೆಡ್ಡಿ ಮುಂತಾದವರು ಇದ್ದರು.

error: Content is protected !!