ಶಾಲಾ ಮಕ್ಕಳಿಗಾಗಿ 5500 ಡೋಸ್ ಲಸಿಕೆ

ದಾವಣಗೆರೆ, ಜ.4- ತಾಲ್ಲೂಕಿನಲ್ಲಿ ಸರ್ಕಾರದ ಸೂಚನೆಯಂತೆ 15 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕೋವಿಡ್-19 ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, ಜ. 05 ರಂದು ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಲಸಿಕೆ ನೀಡುವ ಸಲುವಾಗಿ 5500 ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.

15 ರಿಂದ 18 ವರ್ಷದೊಳಗಿನ ಅಥವಾ 2007 ಮತ್ತು ಅದಕ್ಕೂ ಮುನ್ನ ಹುಟ್ಟಿದ ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಶಾಲೆ, ಕಾಲೇಜುಗಳಲ್ಲಿ ಅಥವಾ ಸಮೀಪದ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣ ಮಾಡಲಾಗುತ್ತಿದೆ.  ಜ. 03 ರಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ.  ಜ. 5 ರಂದು ಕೂಡ ಕಾರ್ಯಕ್ರಮ ಮುಂದುವರೆ ಯಲಿದ್ದು, ದಾವಣಗೆರೆ ನಗರ ಪ್ರದೇಶದ ಸರ್ಕಾರಿ ಮತ್ತು ಖಾಸಗಿ ಸೇರಿ 16 ಶಾಲೆಗಳ 2146 ಮಕ್ಕಳಿಗೆ, ಅಲ್ಲದೆ ತಾಲ್ಲೂಕಿನ ಎಲ್ಲ 25 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.  ಜ. 05 ರಂದು ತಾಲ್ಲೂಕಿನಲ್ಲಿ ಒಟ್ಟು 5500 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.  ಆಯಾ ಶಾಲಾ, ಕಾಲೇಜು ಹಂತ ದಲ್ಲಿ ಮಕ್ಕಳು, ಪಾಲಕರು, ಪೋಷಕರಿಗೆ ಲಸಿಕೆಯ ಮಹ ತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.

error: Content is protected !!