ದಾವಣಗೆರೆ, ಜ.4- ಖಾಸಗಿ ಶಾಲೆಗಳ ಮನ್ನಣೆ ಹಾಗೂ ನವೀಕರಣಕ್ಕೆ ಇರುವ ಅವೈಜ್ಞಾನಿಕ ಮಾನದಂಡ ಗಳನ್ನು ತೆಗೆದು ಹಾಕಿ ಈ ಮೊದಲಿನಂತೆ ಎಲ್ಲ ಖಾಸಗಿ ಶಾಲೆಗಳಿಗೂ ಆರ್.ಟಿ.ಇ. ವಿಸ್ತರಣೆ ಮಾಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ನಿಯಮಗಳು ಜಾರಿಯಾದರೆ ರಾಜ್ಯದಲ್ಲಿ ಶೇ.95ರಷ್ಟು ಶಾಲೆಗಳನ್ನು ಮುಚ್ಚಬೇಕಾಗುತ್ತದೆ.ಕ್ಲಿಷ್ಟಕರವಾದ ಮಾನದಂಡಗಳನ್ನು ಸಡಿಲಿಕೆ ಮಾಡಬೇಕು ಎಂದು ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ವತಿಯಿಂದ ಶಾಸಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಶಾಸಕ ನಾರಾಯಣಸ್ವಾಮಿ ಅವರು ಸ್ಥಳದಲ್ಲಿಯೇ ದಾವಣಗೆರೆಯ ಉತ್ತರ ಮತ್ತು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕರೆಯಿಸಿಕೊಂಡು, ಖಾಸಗಿ ಶಾಲೆಗಳ ಮನ್ನಣೆ ವಿಷಯದಲ್ಲಿ ತೊಂದರೆ ಕೊಡಬಾರದು. ಈ ಬಗ್ಗೆ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ತಾವೂ ಸಹ ಸಮಿತಿ ಸದಸ್ಯರಿದ್ದು, ಮನ್ನಣೆ ನವೀಕರಣಕ್ಕೆ ಹೊಸ ಮಾನದಂಡಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೂ ಖಾಸಗಿ ಶಾಲೆಗಳವರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಸಂಘದ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಕಾರ್ಯದರ್ಶಿ ಹೆಚ್.ಜಿ. ಪ್ರಕಾಶ್, ಉಪಾಧ್ಯಕ್ಷ ವೀರೇಶ್ ಬಿರಾದಾರ್, ಮಂಜುನಾಥ ಸ್ವಾಮಿ, ದಿನೇಶ್ ಗುರುಕುಲ, ಮಧುಕೇಶ್, ಶ್ರೀನಿವಾಸ್ ಹೂವಿನಮಡು ಮತ್ತು ತ್ರಿಶೂಲ್ ವಿದ್ಯಾಸಂಸ್ಥೆ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.