ದೇಶ ಸೇವೆಯ ಅವಕಾಶ ಸಿಕ್ಕಿರುವುದು ಪುಣ್ಯ

ಯಲವಟ್ಟಿ : ಗುರುಸಿದ್ಧಾಶ್ರಮದ ಕಾರ್ಯಕ್ರಮದಲ್ಲಿ ಸೈನಿಕ ಶಿವಕುಮಾರ್ ಸಂತಸ

ಮಲೇಬೆನ್ನೂರು, ಜ. 4- ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದನ್ನು ಪುಣ್ಯ ಎಂದು ಭಾವಿಸಿದ್ದೇನೆ ಮತ್ತು ಸೇವೆಯ ಬಗ್ಗೆ ಹೆಮ್ಮೆ ಇದೆ ಎಂದು ಜಮ್ಮು-ಕಾಶ್ಮೀರದ ಲೇ-ಲಡಾಕ್‌ನ ಗಲ್ವಾನ್ ಪ್ರದೇಶದಲ್ಲಿ ಸೈನಿಕನಾಗಿರುವ ಯಲವಟ್ಟಿಯ ಹೆಚ್. ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

ಯಲವಟ್ಟಿ ಗ್ರಾಮದ ಶ್ರೀ ಗುರುಸಿದ್ಧಾಶ್ರಮ ದಲ್ಲಿ ಅಮವಾಸ್ಯೆ ಪ್ರಯುಕ್ತ ಮೊನ್ನೆ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಗೌರವ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ 26 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದ್ದು, ನಮಗೆ ಸಂಪೂರ್ಣ ಸ್ವತಂತ್ರ ನೀಡಿದ್ದಾರೆ.

ಸೇನೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ತಮ್ಮ ಜೀವಕ್ಕಿಂತ ದೇಶದ ರಕ್ಷಣೆ ಮುಖ್ಯ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ನಮ್ಮ ಮನೆ, ಊರಿಗಿಂತ ದೇಶ ಮುಖ್ಯವಾಗಿದೆ. ಮನೆಯ ಒಳಗಡೆ ಮತ್ತು ಹೊರಗಡೆ ಪ್ರೋತ್ಸಾಹ ಸಿಗದಿದ್ದರೆ ದೇಶ ಸೇವೆ ಮಾಡಲು ಸಾಧ್ಯವಾಗುವುದಿಲ್ಲ.

ಈ ನಿಟ್ಟಿನಲ್ಲಿ ನಮ್ಮ ಮನೆಯವರು ಮತ್ತು ಊರಿನವರು, ಗುರುಗಳು ನೀಡುತ್ತಿರುವ ಪ್ರೀತಿ, ಪ್ರೋತ್ಸಾಹ ನನಗೆ ಸ್ಫೂರ್ತಿಯಾಗಿದ್ದು, ಸೇವೆಯಲ್ಲಿ ನಾನು ಸುಬೇದಾರ್ ಆಗಿ ಮುಂದಿನ ವರ್ಷ ನಿವೃತ್ತಿಯಾಗಲಿದ್ದೇನೆ. ನಿಮಗೆ ಸಾಧ್ಯವಾದರೆ ಇತರರಿಗೆ, ಊರಿಗೆ, ದೇಶಕ್ಕೆ ಒಳ್ಳೆಯದನ್ನು ಮಾಡಿ. ಇಲ್ಲಿದಿದ್ದರೆ ಸುಮ್ಮನೆ ಇದ್ದು ಬಿಡಿ. ಕೆಟ್ಟದ್ದನ್ನು ಮಾಡಬೇಡಿ, ಬಯಸಲೂ ಬೇಡಿ ಎಂದು ಸೈನಿಕ ಶಿವಕುಮಾರ್ ಮನವಿ ಮಾಡಿದರು.

ಹರಿಹರದ ಶ್ರೀ ಗುರು ಬ್ರಹ್ಮಾನಂದ ಸ್ವಾಮಿ ಮಠದ ಆಡಳಿತಾಧಿಕಾರಿ ವಿವೇಕಾನಂದ ಸ್ವಾಮಿ ಮಾತನಾಡಿ, ಸಿದ್ಧಾರೂಢರ ಸರಳತೆಗೆ ಕಬೀರಾ ನಂದ ದಾಸರೂ ಮನಸೋತಿದ್ದರು. ಭಕ್ತರ ಪಾದದ ಧೂಳನ್ನು ದೇವರೆಂದು ಭಾವಿಸಿದವರು ಜಗತ್ತಿನಲ್ಲಿ ಯಾರಾದರೂ ಇದ್ದರೆ  ಅದು ಸಿದ್ಧಾರೂಢರಾಗಿ ದ್ದಾರೆ. ಅಂತಹವರ ನಾಮಸ್ಮರಣೆ ಮಾಡಿದರೆ ಸಾಕು ನಿಮ್ಮ ಸಂಕಷ್ಟ ದೂರವಾಗುತ್ತದೆ ಎಂದರು.

ರಾಜನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಮಾತೋಶ್ರೀ ಶ್ರೀಮತಿ ಗೀತಮ್ಮ ತಾಯಿ ಮಾತನಾಡಿ, ಸತ್ಸಂಗದಿಂದ ಸದ್ಗುಣಗಳು ಸಾಧ್ಯ. ನಾವು ಮಾಡುವ ಉತ್ತಮ ಕಾರ್ಯಗಳಿಂದ ಪುಣ್ಯ ಲಭಿಸುತ್ತದೆ. ಯಾವುದೇ ಸತ್ಸಂಗಕ್ಕಾಗಲೀ ನಿಮ್ಮ ಜೊತೆ ಇತರರನ್ನು ಕರೆದುಕೊಂಡು ಹೋಗಿ ಎಂದರು. 

ದಾಗಿನಕಟ್ಟೆಯ ಶ್ರೀ ಗುರುಸಿದ್ಧಾಶ್ರಮದ ಶ್ರೀ ಕೃಷ್ಣಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ ಅಂತಃಕರಣ ಶುದ್ಧಿ ಮಾಡಿಕೊಂಡಾಗ ಮಾತ್ರ ಬದುಕು ಬಂಗಾರವಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಾತ್ಮಿಕ ಚಿಂತನೆ, ಕಾಯಕ ನಿಷ್ಠೆ ಮೈಗೂಡಿಸಿಕೊಳ್ಳಿ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ದೇಶ ಸೇವೆ ಮಾಡುವ ಸೈನಿಕ ಗ್ರಾಮದಲ್ಲಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಗ್ರಾಮದ ಬಾವಿಕಟ್ಟೆ ಮಲ್ಲೇಶಪ್ಪ ಮತ್ತು ಕುಟುಂಬದವರು ಈ ದಿನದ ದಾಸೋಹ ದಾನಿಗಳಾಗಿದ್ದರು. ನಿವೃತ್ತ ಶಿಕ್ಷಕ ಜಿ. ಬಸಪ್ಪ, ಜಿ. ಮುರುಗೆಪ್ಪ ಗೌಡ್ರು, ಹೊಸಮನೆ ಮಲ್ಲಪ್ಪ, ಎ. ಸುರೇಶ್, ರಾಜಪ್ಪ, ನಿಟ್ಟೂರಿನ ಕೆ. ಸಂಜೀವ ಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ರಂಗಪ್ಪ, ಹೊನ್ನಾಚಾರಿ, ಕುಂಬ ಳೂರಿನ ಕೆ. ಆಂಜನೇಯ, ಕುಬೇರಪ್ಪ, ಹೆಚ್.ಎಂ. ಸದಾಶಿವ, ಮಾಗೋಡು ರೇವಣಸಿದ್ದಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಪ್ರಗತಿಪರ ಕೃಷಿಕ ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ ಅವರು ಸೈನಿಕ  ಹೆಚ್. ಶಿವಕುಮಾರ್ ಕುರಿತು ಅಭಿನಂದನಾ ಪತ್ರ ಓದಿದರು. ಯಲವಟ್ಟಿ ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು. ಸಿರಿಗೆರೆಯ
ಡಿ. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!