ಲಸಿಕೆಯಿಂದ ಯಾವುದೇ ತೊಂದರೆಯಾಗದು

ಹರಿಹರ, ಜ.3 – ಕೊರೊನಾ ರೋಗದಿಂದ ತೊಂದರೆ ಆಗದಂತೆ ತಡೆಯಲು ಪ್ರೌಢಶಾಲಾ ಮತ್ತು ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಎಸ್. ರಾಮಪ್ಪ ಕರೆ ನೀಡಿದ್ದಾರೆ. 

ನಗರದ ಕ್ಷೇತ್ರ ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ನಗರದ ಡಿ.ಆರ್.ಎಂ. ಪ್ರೌಢಶಾಲೆ, ಡಿ.ಆರ್.ಎಂ. ಪಿ.ಯು. ಕಾಲೇಜು ಮತ್ತು ಗಿರಿಯಮ್ಮ ಪಿ.ಯು. ಕಾಲೇಜು ಸಭಾಂಗಣದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕೊರೊನಾ ತಡೆಯಲು ಸರ್ಕಾರ ಈಗಾಗಲೇ ಶೇ. 60 ರಿಂದ 70 ರಷ್ಟು ವಯಸ್ಕರಿಗೆ, ವೃದ್ದರಿಗೆ ಮತ್ತು ಮಹಿಳೆಯರಿಗೆ ಲಸಿಕೆಯನ್ನು ಹಾಕಿದೆ. ಈ ವರ್ಷದಲ್ಲಿ ಮೂರನೇ ಅಲೆ ಬರಬಹುದು ಎಂದು ಅರಿತು ಸರ್ಕಾರ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಲು ಮುಂದಾಗಿದೆ ಎಂದರು.

ಲಸಿಕೆಯಿಂದ ಆರೋಗ್ಯದ ಮೇಲೆ  ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಲಸಿಕೆಯಿಂದ ಆರೋಗ್ಯ ಸುಧಾರಣೆಯಾಗಿ ಶಕ್ತಿ ವೃದ್ಧಿಸುತ್ತದೆ. ಪೋಷಕರು ತಾವೇ ಮುಂದೆ ನಿಂತು ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ನಟರಾಜ್ ಮಾತನಾಡಿ, ಪ್ರೌಢಶಾಲಾ ಮತ್ತು ಪಿ.ಯು. ವಿದ್ಯಾರ್ಥಿಗಳ ಲಸಿಕೆಗೆ ಈಗ ಚಾಲನೆ ನೀಡಲಾಗಿದೆ. ಹರಿಹರ ತಾಲ್ಲೂಕಿನ 7,409 ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು 4,370 ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11,773  ವಿದ್ಯಾರ್ಥಿಗಳಿಗೆ ತಾಲ್ಲೂಕಿನಾದ್ಯಂತ ಲಸಿಕೆಯನ್ನು ಹಾಕಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್, ಪೌರಾಯುಕ್ತೆ ಎಸ್ ಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಆರೋಗ್ಯ ಅಧಿಕಾರಿ ಡಾ ಚಂದ್ರಮೋಹನ್, ಡಾ. ಕಾವ್ಯ, ಡಿ.ಆರ್.ಎಂ ಕಾಲೇಜು ಪ್ರಾಂಶುಪಾಲ ರಾಜಶೇಖರ, ಚಂದ್ರನಾಯಕ್, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳಿ, ತಿಪ್ಪಣ್ಣ ರಾಜ್, ಈಶಪ್ಪ ಬೂದಿಹಾಳ್, ಕೆ ಶಿವಮೂರ್ತಿ, ತಾಲ್ಲೂಕು ಆಡಳಿತದ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!