ಜ.14 ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ

ಜ.14 ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ - Janathavaniಪಾದಯಾತ್ರೆಯ ವರ್ಷಾಚರಣೆ, ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ

ದಾವಣಗೆರೆ, ಜ.3- ಕೂಡಲಸಂಗಮ ಜಗದ್ಗುರುಗಳ ಪಾದಯಾತ್ರೆಯ ವರ್ಷಾಚರಣೆ, ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಜ. 14 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2 ಎ ಮೀಸಲಾತಿ ಚಳವಳಿಗಾಗಿ ಪಾದಯಾತ್ರೆ ಸ್ವಾಗತ ಸಮಿತಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ, ಲಿಂಗಾಯತ ಗೌಡ ಮಹಾಸಭಾ, ಲಿಂಗಾಯತ ಮಲೆಗೌಡ ಹಾಗೂ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ವಿವಿಧ ಘಟಕಗಳ ಸಹಯೋಗದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜ. 14ರ ಸಂಕ್ರಾಂತಿ ದಿನಕ್ಕೆ ಐತಿಹಾಸಿಕ ಪಾದಯಾತ್ರೆ ಚಳವಳಿಗೆ ಒಂದು ವರ್ಷ ತುಂಬಲಿದೆ. 2 ಎ ಮೀಸಲಾತಿ ಪಡೆಯುವ ಸಲುವಾಗಿ ಬೃಹತ್ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು. 365 ದಿನಗಳ ಕಾಲ ವಿಶ್ರಾಂತಿಯಿಲ್ಲದೇ ಸಮಾಜದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ನಡೆಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಅಂದಿನ ಸಿಎಂ ಯಡಿಯೂರಪ್ಪ ಅವರು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದರೂ, ಹುಸಿಯಾಯಿತು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮೀಸಲಾತಿಯ ಭರವಸೆ ನೀಡಿದ್ದಾರೆ. ಮೀಸಲಾತಿ ಪಡೆಯಲು ಶಕ್ತಿ, ಯುಕ್ತಿ, ಭಕ್ತಿಯಿಂದ ಚಳವಳಿ ಮಾಡಲಾಗುವುದು. ಕೂಡಲಸಂಗಮದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಅಂದು ಮತ್ತೆ ಮೀಸಲಾತಿಯ ಹಕ್ಕೊತ್ತಾಯ ಮಂಡಿಸಲಾಗುವುದು. ಅಂದು ಎಳ್ಳು-ಬೆಲ್ಲ ಬೀರುವ ಮೂಲಕ ಮೀಸಲಾತಿಯ ಸಿಹಿ ಸುದ್ದಿ ಸಿಗುವ  ವಿಶ್ವಾಸ ತಮ್ಮದಾಗಿದೆ ಎಂದರು.

2 ಎ ಮೀಸಲಾತಿ ನೀಡಲು ಯಾವುದೇ ಸಮಿತಿ ರಚಿಸುವ  ಮತ್ತು ಕುಲಶಾಸ್ತ್ರ ಅಧ್ಯಯನದ ಅಗತ್ಯವಿಲ್ಲ. ಕೇವಲ ಶಾಶ್ವತ ಹಿಂದುಳಿದ ವರ್ಗದ ಆಯೋಗದ ವರದಿ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶವಿದೆ ಎಂದು ಹೇಳಿದರು.

ಸಮಾಜದ ಋಣ ತೀರಿಸಲು ಇದು ಪರ್ವಕಾಲವಾಗಿದ್ದು, ಸಮಾಜದ ಉದ್ಧಾರಕ್ಕಾಗಿ, ಸಮಾಜ ಜಾಗೃತಿಗಾಗಿ ನಡೆಯುವ ಹೋರಾಟಕ್ಕೆ ಸಮಾಜ ಬಾಂಧವರು ಕೈಜೋಡಿಸುವಂತೆ ಒತ್ತಾಯಿಸಿದರು.

ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಕಳೆದ 27 ವರ್ಷಗಳ ಕಾಲ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಶ್ರೀಗಳು ಕೂಡ ಅವಿರತವಾಗಿ ಶ್ರಮಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೂಡ ಚಳವಳಿ ಮೂಲಕ. ಪಂಚಮಸಾಲಿ ಸಮಾಜ ಸಹ ಶಾಂತಿ, ಗಾಂಧಿ ಮಾರ್ಗದಲ್ಲಿಯೇ ಹೋರಾಟದ ಹಾದಿ ಹಿಡಿದಿದೆ ಎಂದರು.

ಜ.14 ರಂದು ಕೂಡಲಸಂಗಮದಲ್ಲಿ ನಡೆಯುವ ಬೃಹತ್ ಸಮಾರಂಭಕ್ಕೆ ಜಿಲ್ಲೆಯಿಂದ 10 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಪಂಚಮಸಾಲಿ ಸಮಾಜದ ಹಾಲಿ,  ಮಾಜಿ ಸಂಸದರು, ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್, ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್, ಮುಖಂಡರಾದ ಎಸ್. ಓಂಕಾರಪ್ಪ, ಕಾರಿಗನೂರು  ಬಸವರಾಜಪ್ಪ, ಶಾಂತಕುಮಾರ್ ಸ್ವಾಗಿ, ಚಿತ್ರದುರ್ಗದ ಗಂಗಾಧರಪ್ಪ, ಮಂಜಣ್ಣ ಪೂಜಾರ್ ಮತ್ತಿತರರಿದ್ದರು.

error: Content is protected !!