ಪುರಾಣದ ಮುಖೇನ ಆಚಾರ-ವಿಚಾರ ಅರಳಿಸಿದ ಪುಟ್ಟಜ್ಜಯ್ಯ

ತಿಂಗಳ ಪುರಾಣ ಪ್ರಾರಂಭೋತ್ಸವಕ್ಕೆ ಓಂಕಾರ ಶಿವಾಚಾರ್ಯ ಶ್ರೀಗಳ ಚಾಲನೆ

ದಾವಣಗೆರೆ, ಜ.3- ಜ್ಞಾನಾಮೃತವಾಗಿರುವಂತಹ ಪುರಾಣದ ಮುಖೇನ ಜನತೆಯ ಮನೆ-ಮನಗಳಲ್ಲಿ ಸಂಸ್ಕಾರ, ಆಚಾರ, ವಿಚಾರಗಳು ಮತ್ತು ಗುರು ಭಕ್ತಿಯನ್ನು ಅರಳಿಸುವ ಕೆಲಸ ಮಾಡಿದವರೆಂದರೆ ಅದು ದಿ. ಶ್ರೀ ಪುಟ್ಟರಾಜ ಕವಿ ಗವಾಯಿಗಳು ಎಂಬುದನ್ನು ದಾವಣಗೆರೆ ಭಕ್ತರು ಮರೆಯುವಂತಿಲ್ಲ ಎಂದು  ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಅವರು, ಇಂದು ಸಂಜೆ ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪಾಶೀರ್ವಾದದೊಂದಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ-ದಾವಣಗೆರೆ ವತಿಯಿಂದ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಮುಗುಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಘನ ಲೀಲಾಮೃತ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುಟ್ಟರಾಜ ಕವಿ ಗವಾಯಿಗಳು 48 ವರ್ಷಗಳ ಹಿಂದಿನಿಂದ ಪುರಾಣ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದಾರೆ. ಅವರ ಕಾರುಣ್ಯದ, ತಪಸ್ಸಿನ, ಜ್ಞಾನ ಭರಿತ, ಸಂಗೀತ, ವಿದ್ವತ್ ಭರಿತವಾದಂತಹ ಕಲಾ ವೇದಿಕೆ ಮತ್ತು ಪುರಾಣ ವೇದಿಕೆ ಇಂದು ಉದ್ಘಾಟನೆಯಾಗಿದೆ. ಬಕ್ಕೇಶ್ವರ ಸ್ವಾಮಿಯ ಈ ಸನ್ನಿಧಿ ದಿವ್ಯ ದೇಗುಲವಾಗಿದ್ದು, ಇಲ್ಲಿ ಎಲ್ಲ ಭಾಗದ ಭಕ್ತರು ಬಂದು ಮಿಲನಗೊಂಡು ತಮ್ಮೆಲ್ಲಾ ಭವ-ಬಂಧನಗಳನ್ನು ಬದಿಗಿರಿಸಿ ತಿಂಗಳಾಂತ್ಯದ ಪುರಾಣ ಕೇಳುವ ಮೂಲಕ ಬದುಕಿನಲ್ಲಿ ಹೊಸತನವನ್ನಾಗಲೀ, ಶ್ರದ್ಧಾ-ಭಕ್ತಿ, ಜ್ಞಾನ, ವೈರಾಗ್ಯ, ಆಚಾರ, ನಡೆ-ನುಡಿಗಳನ್ನಾಗಲೀ ಮೈಗೂಡಿಸಿಕೊಳ್ಳಲು ಮುಕ್ತವಾದ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಪುರಾಣದ ಮುಖೇನ ಮುಗುಳಖೋಡದ ಶ್ರೀ ಯಲ್ಲಾಲಿಂಗೇಶ್ವರರ ಜೀವನ ಮತ್ತು ಸಾಧನ ದರ್ಶನವನ್ನು ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ತೋಟೇಂದ್ರ ಶಾಸ್ತ್ರಿಗಳು ತಿಂಗಳ ಪರ್ಯಂತ ನೀಡಲಿದ್ದಾರೆ. ತಾಯಂದಿರು ಟಿವಿ ಕಾರ್ಯಕ್ರಮಗಳಿಗೆ ಮನಸೋಲುವುದನ್ನು ಬಿಟ್ಟು ಒಂದು ತಿಂಗಳ ಕಾಲ ಈ ಜ್ಞಾನ ಸಂಪಾದನೆ ಮಾಡಿಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. 

ದಾವಣಗೆರೆ ಭಾಗದ ಜನರು ದಾನ ಮಾಡುವುದರಲ್ಲಿ ಗುರುತಿಸಿಕೊಳ್ಳುತ್ತಾರೆಯೇ ಹೊರತು ಕೈಗೆ ಒಡವೆ, ವಸ್ತ್ರ ಹಾಕಿಕೊಂಡು ಗುರುತಿಸಿಕೊಳ್ಳುವಂತಹ ಕೆಲಸ ಮಾಡಲ್ಲ ಎಂದರು.

ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ತೋಟೇಂದ್ರ ಶಾಸ್ತ್ರಿಗಳು ಪುರಾಣ ಪ್ರವಚನ ನಡೆಸಿದರು. ಗದಗದ ವೀರೇಶ್ವರ ಪುಣ್ಯಾಶ್ರಮದ ಶಿವಾನಂದ ಜಿ. ಮಂದೇವಾಲ ಸಂಗೀತ ಸೇವೆ ನೀಡಿದರು. ಬಸವರಾಜ ಹಜೇರಿ ಸಾ. ಚಲಗೇರಿ ತಬಲಾ ಸೇವೆ ನೀಡಿದರು.   

ಗದಗ-ದಾವಣಗೆರೆ-ಶಿವಮೊಗ್ಗದ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯ ಅಜ್ಜನವರು ಪುರಾಣದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಗುರು ಬಕ್ಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಾಗಾನಹಳ್ಳಿ ಶಿವಾನಂದಪ್ಪ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಸೇರಿದಂತೆ, ಇತರರು ಇದ್ದರು. ವಿನೋದ್ ಕುಮಾರ್ ಹೂಗಾರ್ ಪ್ರಾರ್ಥಿಸಿದರು. ಅಜ್ಜಂಪುರ ಶೆಟ್ರು ಮೃತ್ಯುಂಜಯ ಸ್ವಾಗತಿಸಿದರು. ಶಿವಬಸಯ್ಯ ಚಿರಂತಿಮಠ ನಿರೂಪಿಸಿದರು.

error: Content is protected !!