ಮಲೇಬೆನ್ನೂರು : ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಉಮಾ ಬಣಕಾರ್ ಅಭಿಮತ
ಮಲೇಬೆನ್ನೂರು, ಜ. 3- ಸಹಕಾರಿಣಿ, ತಾಳ್ಮೆ, ರಚನಾತ್ಮಕತೆ, ಇಚ್ಛಾಶಕ್ತಿ ಈ ನಾಲ್ಕು ಗುಣಗಳನ್ನು ಹೊಂದಿರುವ ಪೂರ್ಣ ಭಾವವೇ ಸ್ತ್ರೀಯಾಗಿದ್ದಾಳೆ. ಅಂತಹ ಸ್ತ್ರೀ ಕುಲಕ್ಕೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು, ಸ್ವತಂತ್ರ ಪೂರ್ವದಲ್ಲೇ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ, ನೋವು-ಅವಮಾನಗಳನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡಿದ ಮಹಾತಾಯಿ ಎಂದೆಂದಿಗೂ ಅಮರ ಎಂದು ಉಪ ನ್ಯಾಸಕಿ ಶ್ರೀಮತಿ ಉಮಾ ಬಣಕಾರ್ ತಿಳಿಸಿದರು.
ಅವರು ಸೋಮವಾರ ಇಲ್ಲಿನ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ವತಿಯಿಂದ ಏರ್ಪಡಿಸಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.
ಇಂದು ನಾವೆಲ್ಲರೂ ಸಮಾಜದಲ್ಲಿ ತಲೆ ಎತ್ತಿಕೊಂಡು ಬದುಕುತ್ತಿದ್ದರೆ, ಅದಕ್ಕೆ ಸಾವಿತ್ರಿಬಾಯಿ ಫುಲೆಯಂತಹ ಮಹಿಳಾ ಹೋರಾಟಗಾರ್ತಿಯರು ಕಾರಣರಾಗಿದ್ದಾರೆ. ಅನಿಷ್ಟ ಆಚರಣೆ ವಿರೋಧಿಸಿದ್ದ ಸಾವಿತ್ರಿಬಾಯಿ ಫುಲೆ ಅವರು ತಮ್ಮ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಪ್ರಗತಿಗೆ ಕಾರಣರಾಗಿದ್ದಾರೆ. ಇವರ ಈ ಹೋರಾಟಕ್ಕೆ ಇವರ ಪತಿ ಜ್ಯೋತಿಬಾ ಫುಲೆ ಅವರು ಬೆಂಬಲವಾಗಿದ್ದರು. ಇಂಥವರ ಬಗ್ಗೆ ನೀವು ಓದಿ ತಿಳಿದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಉಮಾ ಬಣಕಾರ್ ಕರೆ ನೀಡಿದರು.
ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಮೂಲಕ ಇಂತಹ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಸೇರಿದಂತೆ, ಇಂತಹ ಅನೇಕ ಮಹಾನ್ ವ್ಯಕ್ತಿಗಳ ಬದುಕಿನ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಪುರಸಭೆ ಸದಸ್ಯ ಸಾಬೀರ್ ಅಲಿ, ವಕೀಲರಾದ ಜಿ.ಎಂ. ಅಮೃತ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ಕೊಕ್ಕ ನೂರಿನ ಮಾರುತಿ ದಾಸರ್, ಸುನೀಲ್, ಗ್ರಾಮ ಸಹಾಯಕ ಜಿಗಳಿ ರಂಗನಾಥ್, ಉಪನ್ಯಾಸಕರಾದ ಹಳ್ಳಿಹಾಳ್ ಹೆಚ್.ಎಸ್. ಆಕಾಶ್, ಗಂಗಾ, ಅರ್ಪಿತ, ಪಲ್ಲವಿ, ಪತ್ರಕರ್ತ ಜಿಗಳಿ ಪ್ರಕಾಶ್, ಬೆಣ್ಣೇರ ನಂದ್ಯಪ್ಪ ಭಾಗವಹಿಸಿದ್ದರು.
ಇಂಗ್ಲಿಷ್ ಉಪನ್ಯಾಸಕ ಪುಟ್ಟಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಕೊಪ್ಪದ ತಿಪ್ಪಣ್ಣ ಕಬ್ಬಾರ್ ವಂದಿಸಿದರು.