ಮಲೇಬೆನ್ನೂರು, ಜ.2- ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ವಾರ್ಡಿನಲ್ಲಿ ಕುಡಿಯುವ ನೀರಿವ ಸಮಸ್ಯೆ ಸವಾಲ್ ಆಗಿ ಎದುರಾಗಿದ್ದು, ಕೆಲವು ಸದಸ್ಯರು ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಲು ಮುಂದಾಗಿದ್ದಾರೆ.
ಪಟ್ಟಣದ 15ನೇ ವಾರ್ಡ್ನಲ್ಲಿ ಪುರಸಭೆಯಿಂದ ನೀರು ಪೂರೈಸುವ ಬೋರ್ವೆಲ್ಗಳು ಸುಟ್ಟು ಹೋಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಾಗ ಕಾರಣ ಹೇಳಿದ್ದರಿಂದ ನಾವೇ ನಮ್ಮ ಸ್ವಂತ ಹಣದಲ್ಲಿ ವಾರ್ಡ್ನ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ ಎಂದು ವಾರ್ಡಿನ ಸದಸ್ಯೆ ಶ್ರೀಮತಿ ನಿಗೀನಾ ಬಾನು ಅನ್ವರ್ ಬಾಷಾ ಅವರು ಜನತಾವಾಣಿಗೆ ತಿಳಿಸಿದರು. ವಾರ್ಡ್ನಲ್ಲಿ ಜನ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಹೆಚ್ಚಿರುವುದರಿಂದ ನೀರು ಪೂರೈಕೆಗೆ ಮುಂದಾಗಿದ್ದೇವೆ ಎಂದರು. ಅಲ್ಲದೇ 2ನೇ ವಾರ್ಡಿನಲ್ಲೂ ಕಳೆದ ವರ್ಷದಿಂದಲೂ ನೀರಿನ ಸಮಸ್ಯೆ ಇದ್ದು, ಅದು ಈಗ ಮತ್ತಷ್ಟು ಹೆಚ್ಚಾಗಿದೆ. ಇಲ್ಲಿಂದ ಆಯ್ಕೆಯಾಗಿರುವ ಶ್ರೀಮತಿ ಸಮಯ್ಯ ಬಾನು, ಎಂ.ಬಿ. ರುಸ್ತುಂ ಅವರು ಸಮಸ್ಯೆ ಕುರಿತು ಶಾಸಕ ರಾಮಪ್ಪ ಅವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ವಾರ್ಡ್ ನಂ.16, 17,18 ಮತ್ತು 19 ರಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಸೋಮವಾರ ಪುರಸಭೆ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡುವುದಾಗಿ 17ನೇ ವಾರ್ಡಿನ ಸದಸ್ಯೆ ಅಕ್ಕಮ್ಮ ಬಿ. ಸುರೇಶ್ ತಿಳಿಸಿದ್ದಾರೆ.