ಬಸವ ಸ್ಮರಣೆಯಲ್ಲಿಯೇ ಸಾತ್ವಿಕ ಬದುಕು ಸಾಗಿಸಿದ ಹೆಚ್.ಎಂ. ಸ್ವಾಮಿ

ದಾವಣಗೆರೆ, ಜ.2- ಬಸವ ಸ್ಮರಣೆಯಲ್ಲಿಯೇ ಸಾತ್ವಿಕ ಬದುಕನ್ನು ಕಟ್ಟಿಕೊಂಡಿದ್ದ ಲಿಂ.ಹೆಚ್.ಎಂ. ಸ್ವಾಮಿಯವರು ಗುರು – ಹಿರಿಯರ ಬಗ್ಗೆ ಅಪಾರವಾದ ಭಕ್ತಿ-ಭಾವ ಹೊಂದಿದ್ದರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದಲ್ಲಿ ಬಸವ ಬಳಗದ ಗೌರವಾಧ್ಯಕ್ಷರೂ, ಕೈಗಾರಿಕೋದ್ಯಮಿಗಳೂ, ಸಮಾಜ ಸೇವಕರಾಗಿದ್ದ ಲಿಂ. ಹೆಚ್.ಎಂ. ಸ್ವಾಮಿಯವರ ಪುಣ್ಯಸ್ಮರಣೆ ಹಾಗೂ `ಸದ್ಭಾವದ ಸೊಡರು’ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಡೆ-ನುಡಿ ಒಂದಾಗಿಸಿಕೊಂಡು ತಮ್ಮ ಬದುಕಿನಲ್ಲಿ ಬಸವ ಸ್ಮರಣೆ ಮಾಡಿಕೊಂಡು ಬದುಕು ಸವೆಸಿದವರು ಎಂದು ಸ್ವಾಮಿಯವರ ಸಮಾಜ ಸೇವೆಯನ್ನು ಗುಣಗಾನ ಮಾಡಿದರು.

ಬೆಂಗಳೂರು ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ವೈಚಾರಿಕತೆಯ ತಳಹದಿಯ ಮೇಲೆ ರೂಪಿಸಿಕೊಟ್ಟ ಲಿಂಗವಂತ ಧರ್ಮದ ಆಚಾರ, ವಿಚಾರ, ನಂಬಿಕೆ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದ ಹೆಚ್.ಎಂ. ಸ್ವಾಮಿಯವರು ನಡೆ ನುಡಿಗಳಲ್ಲಿ ಆಚರಣೆಗೆ ತಂದರು ಎಂದು ಹೇಳಿದರು.

ಬಸವ ಬಳಗದ ವಿ. ಸಿದ್ಧರಾಮ ಶರಣರು ಮಾತನಾಡಿ, ಶರಣರ ಕಾಯಕ ತತ್ವಕ್ಕೆ ಬದ್ಧರಾಗಿ ತಮ್ಮ ಕಾಯವನ್ನು ಬಸವಾದಿ ಪ್ರಮಥರ ಮಾರ್ಗದರ್ಶನದಲ್ಲಿ ದುಡಿಸಿಕೊಂಡ ಸ್ವಾಮಿಯವರು ಬಸವ ಬೆಳಗನ್ನು ಪ್ರತಿ ಹಳ್ಳಿಗಳಿಗೂ ತೆಗೆದುಕೊಂಡು ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು ಎಂದರು.

ಇದೇ ವೇಳೆ ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಹೆಚ್.ಎಂ. ಸ್ವಾಮಿಯವರ ಜೀವನ ಸಾಧನೆ ಕುರಿತ ` ಸದ್ಭಾವದ ಸೊಡರು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಶಿರೋಳ ವಿಜಯ ಮಹಾಂತೇಶ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಬೆಳಗಾವಿಯ ಬಸವ ತತ್ವ ಅನುಭಾವ ಕೇಂದ್ರದ ಮಾತೆ ವಾಗ್ದೇವಿ ತಾಯಿ, ಮಾತೆ ಕುಮುದಿನಿ ತಾಯಿ, ಬಸವ ತತ್ವ ಪ್ರಚಾರಕ ಜಿ.ಎನ್. ಬಸವರಾಜಪ್ಪ, ಅಜ್ಜಂಪುರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಮಂದಾಕಿನಿ ತಾಯಿ, ಪ್ರಾಧ್ಯಾಪಕಿ ಡಾ. ಗೀತಾ ಬಸವರಾಜ್, ಹುಚ್ಚಪ್ಪ ಮಾಸ್ತರ್ ಮತ್ತಿತರರಿದ್ದರು.

ಬಸವ ಬಳಗದ ಶರಣೆಯರು ವಚನ ಗೀತೆ ಹಾಡಿದರು. ಶಿಲ್ಪಾ ಹಿರೇಮಠ್ ಸ್ವಾಗತಿಸಿದರು. ಶೃತಿ ನಿರೂಪಿಸಿದರು.

error: Content is protected !!