ಜಗಳೂರು, ಜ.2- ಇಂದು ಚಿತ್ರದುರ್ಗದ ಭದ್ರಾ ಮೇಲ್ದಂಡೆ ಕೇಂದ್ರ ಕಛೇರಿಯಲ್ಲಿ ಜಗಳೂರು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ನೀರಾವರಿ ಕಲ್ಪಿಸುವ ಕಾಮಗಾರಿ ಪರಿಶೀಲನೆ ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಗಳೂರಿನ ಶಾಸಕರು ಹಾಗೂ ಎಸ್ಟಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ, ಜಗಳೂರು ಕ್ಷೇತ್ರಕ್ಕೆ 45 ಸಾವಿರ ಎಕರೆ ಪ್ರದೇಶಕ್ಕೆ ಅಪ್ಪರ್ ಭದ್ರಾ ಯೋಜನೆ ಯಡಿ ನೀರಾವರಿ ಕಲ್ಪಿಸಲು ಈಗಾಗಲೇ 1338 ಕೋಟಿ ರೂ.ಗಳಿಗೆ ಕೇಂದ್ರದ ಜಲನೀತಿ ಯೋಜನೆಯಡಿ ಸೇರ್ಪಡೆ ಯಾಗಿ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಪ್ರಾರಂಭಿಸಲು ಶೀಘ್ರವೇ ಕಾಮಗಾರಿ ಉದ್ಘಾಟನೆ ಮಾಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ ಅವ ರನ್ನು ಉದ್ಘಾಟನೆಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸೇರಿದಂತೆ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್‌ಗಳಾದ ಕೆ.ಎಂ.ಶಿವಪ್ರಕಾಶ್, ಹೆಚ್.ಎಫ್.ಲಂಬಾಣಿ, ಕಾರ್ಯಪಾಲಕ ಇಂಜಿನಿಯ ರ್‌ಗಳಾದ ಚಂದ್ರಮೌಳಿ, ಶ್ರೀಧರ್, ಸಹಾಯಕ ಇಂಜಿನಿಯರ್ ವೆಂಕಟೇಶ್, ಹರೀಶ್ ಮತ್ತಿತರರು ಹಾಜರಿದ್ದರು. ಸಭೆಯ ನಂತರ ಚಿತ್ರದುರ್ಗ ಶಾಖಾ ಕಾಲುವೆ ವೀಕ್ಷಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಶಾಸಕ
ಎಸ್.ವಿ.ರಾಮಚಂದ್ರ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಸನ್ಮಾನಿಸಿ, ಗೌರವಿಸಿದರು.