ಶಾಸಕ ರೇಣುಕಾಚಾರ್ಯ
ಹೊನ್ನಾಳಿ, ಜ. 2- ಕೊಟ್ಟ ಮಾತಿನಂತೆ ಒಂದು ವರ್ಷದೊಳಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಹನುಮಸಾಗರ ಗ್ರಾಮದ ಬಳಿಯ ತುಂಗಭದ್ರಾ ನದಿಯ ತಟದಲ್ಲಿ ಕೆರೆ ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅವಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಒಟ್ಟು 518 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 17 ಗ್ರಾಮಗಳ 30 ಕೆರೆಗಳನ್ನು ತುಂಬಿಸುವ 112 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇದೀಗ ಚಾಲನೆ ಸಿಕ್ಕಿದೆ ಎಂದರು.
ತುಂಗಭದ್ರಾ ನದಿಯ ಮೇಲ್ಭಾಗದಲ್ಲಿ ಬರುವ ಹಳ್ಳಿಗಳ ಕೆರೆಗಳನ್ನು ತುಂಬಿಸಲು 460 ಕೋಟಿ ರೂ.ಹಾಗೂ ಕೆಳಭಾಗದ ಹಳ್ಳಿಗಳಲ್ಲಿನ ಕೆರೆಗಳನ್ನು ತುಂಬಿಸುವ ಬೆನಕನಹಳ್ಳಿ ಏತ ನೀರಾವರಿಗೆ
58 ಕೋಟಿ ರೂ. ಸೇರಿ ಒಟ್ಟು 518 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅವಳಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.
ಗೋವಿನಕೋವಿ ಬಳಿ ತುಂಗಭದ್ರಾ ನದಿಯ ತಟದಲ್ಲಿ ಕೆರೆಗಳನ್ನು ತುಂಬಿಸಲು 258 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು, ವಿದ್ಯುದೀಕರಣ ಹಾಗೂ ಭೂ ಪರಿಹಾರಕ್ಕೆ 20 ಕೋಟಿ ರೂ. ಹಾಗೂ ಕೆರೆಗಳ ಪುನಶ್ಚೇತನಕ್ಕೆ 70 ಕೋಟಿ ಹಣ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಬರುವ ಕೆರೆಗಳು ಹಾಗೂ ಗೋಕಟ್ಟೆಗಳು ಸೇರಿ 127 ಕೆರೆಗಳು ಈ ಯೋಜನೆಯಿಂದ ಭರ್ತಿಯಾಗಲಿದ್ದು, ಅವಳಿ ತಾಲ್ಲೂಕುಗಳಲ್ಲಿ ಜಲಸಮೃದ್ಧಿಯಾಗಲಿದೆ ಎಂದರು ಹಾಗೂ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು 100 ಕೋಟಿ ರೂ. ವೆಚ್ಚದ ಯೋಜನೆಯ ವರದಿ ಸಿದ್ದ ಪಡಿಸಿದ್ದು, ಸದ್ಯದರಲ್ಲೇ ಈ ಯೋಜನೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಲಿದ್ದು, ಅವಳಿ ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅವಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು, ಅವಳಿ ತಾಲ್ಲೂಕಿನ ಜನರು ಅವರಿಗೆ ಸದಾ ಚಿರಋಣಿ ಎಂದ ರೇಣುಕಾ ಚಾರ್ಯ, ನಾನು ಕೊಟ್ಟ ಮಾತಿನಂತೆ ಅವಳಿ ತಾಲ್ಲೂ ಕುಗಳ ಕೆರೆಗಳನ್ನು ತುಂಬಿಸುತ್ತಿದ್ದೇನೆ ಎಂದರು.
ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಅಲಂಕಾರಿಕ ದೀಪ, ಸಿಸಿ ರಸ್ತೆಗಳು ಸೇರಿದಂತೆ ನೂರಾರು ಕೋಟಿ ಅನುದಾನಗಳನ್ನು ಸರ್ಕಾರದಿಂದ ತಂದು ಅಭಿವೃದ್ಧಿ ಪಡಿಸುತ್ತಿದ್ದು, ಅವಳಿ ತಾಲ್ಲೂಕುಗಳನ್ನು ಮಾದರಿ ತಾಲ್ಲೂಕು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಗರ್ ಹುಕ್ಕುಂ ಕಮಿಟಿ ಅಧ್ಯಕ್ಷ ಮಾದೇನಹಳ್ಳಿ ನಾಗರಾಜ್, ತಾ.ಪಂ ಮಾಜಿ ಸದಸ್ಯ ಶಿವಾನಂದ್, ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ನೀರಾವರಿ ಇಲಾಖೆ ಎಇಇ ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.