ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶಯ
ಮಲೇಬೆನ್ನೂರು, ಮೇ 5- ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದರ ಪರಿಣಾಮ ಗ್ರಾಮೀಣ ಪ್ರದೇಶದವರಿಗೆ ಉನ್ನತ ಸ್ಥಾನ ಸಿಕ್ಕಿಲ್ಲ ಎಂದು ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಜಿಗಳಿ ಗ್ರಾಮದಲ್ಲಿ ಶ್ರೀ ಗುರುಧ್ಯಾನ, ನವೋದಯ, ಮೊರಾರ್ಜಿ ಮತ್ತು ಸೈನಿಕ ಶಾಲೆಗಳ ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಹಣವಂತರ, ಉಳ್ಳವರ ಪಾಲಾಗಿದ್ದ ಶಿಕ್ಷಣ ಕ್ಷೇತ್ರ ಇಂದು ಎಲ್ಲರ ಕೈಗೆ ಸುಲಭವಾಗಿ ಸಿಗುವಂತೆ ಆಗಿರುವುದು ಸಂತೋಷದ ವಿಷಯವಾಗಿದ್ದರೂ ಗ್ರಾಮೀಣ ಪ್ರದೇಶದವರು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಬೇಕು. ಐಎಎಸ್, ಐಎಫ್ಎಸ್ ತರಬೇತಿ ಪಡೆಯಲು ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಬೇಕೆಂದು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಹಣ ಇದ್ದವರು ತಮ್ಮ ಮಕ್ಕಳು ವಿದ್ಯಾವಂತರಾಗ ಬೇಕೆಂದು ಲಕ್ಷ ಲಕ್ಷ ಖರ್ಚು ಮಾಡಿ ಖಾಸಗಿ ವಸತಿ ಶಾಲೆಗೆ ಸೇರಿಸುತ್ತಾರೆ. ಆದರೆ ಅಲ್ಲಿ ಅವರಿಗೆ ಹೆಚ್ಚು ಅಂಕ ಪಡೆಯುವ ಶಿಕ್ಷಣ ಮಾತ್ರ ಕಲಿಸಲಾಗುತ್ತದೆ. ಅದೇ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ, ಪ್ರಾಮಾಣಿಕತೆಯ ಬಗ್ಗೆಯೂ ಕಲಿಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲದಿಂದ ಹಳ್ಳಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿ ಕೋಚಿಂಗ್ ನೀಡಲು ಮುಂದಾಗಿರುವ ಎಂ.ಕೆ. ಸ್ವಾಮಿ ಅವರನ್ನು ಅಭಿನಂದಿಸಿದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾಮದ ಟಿ. ಚಂದ್ರಶೇಖರಪ್ಪ, ದಾವಣಗೆರೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹಿಂಡಸಘಟ್ಟಿಯ ಪಿ.ಬಿ. ನಾಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿದರು.
ಗ್ರಾಮದ ಮುಖಂಡ ಗೌಡ್ರ ಬಸವರಾಜಪ್ಪ, ಗ್ರಾ.ಪಂ. ಸದಸ್ಯರಾದ ಕೆ.ಜಿ. ಬಸವರಾಜ್, ಜಿ. ಬೇವಿನಹಳ್ಳಿಯ ಆನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಹರಿಹರ ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಹರಿಹರ ತಾಲ್ಲೂಕು ಗಾಮಾಂತರ ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಪರಮೇಶ್ವರಪ್ಪ, ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಿಂಡಸಘಟ್ಟಿಯ ಮೃತ್ಯುಂಜಯ, ಸಿಡಿಓ ಆರ್. ರಮೇಶ್, ಮಕ್ಕಳ ತಜ್ಞ ನಂದ್ಯಪ್ಪ, ಕೆೆ.ಎಂ. ರಾಮಪ್ಪ, ಎಂ.ಬಿ. ಜಗದೀಶ್, ಉಪನ್ಯಾಸಕರಾದ ಉಮಾ ಬಣಕಾರ್, ತಿಪ್ಪಣ್ಣ ಕಬ್ಬೂರು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಸಂಸ್ಥಾಪಕ ಎಂ. ಹಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ. ಸ್ವಾಮಿ ಸ್ವಾಗತಿಸಿದರು. ಶ್ರೀಮತಿ ಸಾನವಿ ಸ್ವಾಮಿ ವಂದಿಸಿದರು.