ದಾವಣಗೆರೆ, ಮೇ 5- ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿರುವುದು ವಿಪರ್ಯಾಸ ಮತ್ತು ಇದನ್ನು ಅಭಾವಿಪ ಅತಿ ಕಟುವಾಗಿ ಖಂಡಿಸಿದೆ.
ಇದರಿಂದಾಗಿ ಬಡ ಮತ್ತು ಪ್ರತಿಭಾವಂತ ನಿರುದ್ಯೋಗಿಗಳ ಕನಸಿಗೆ ತಣ್ಣೀರೆರಚಿದಂತೆ ಅಷ್ಟೇ ಅಲ್ಲದೇ ಅನ್ಯಾಯ ಎಸಗಿದಂತೆಯೂ ಆಗುತ್ತದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಅಕ್ರಮ ಭ್ರಷ್ಟಾಚಾರ ನಡೆಯುತ್ತಿರುವುದು ವಿದ್ಯಾವಂತ ನಿರುದ್ಯೋಗಿಗಳನ್ನು ತೀವ್ರ ಹತಾಶರನ್ನಾಗಿಸಿದೆ. ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಗಳು ರಾಜಾರೋಷವಾಗಿ ನಡೆಯುತ್ತಿದ್ದು, ಈ ಪರೀಕ್ಷೆಗಳ ನೈಜ ಉದ್ದೇಶವನ್ನೇ ಬುಡಮೇಲು ಮಾಡಿವೆ. ಆಡಳಿತ ವ್ಯವಸ್ಥೆ, ರಾಜಕೀಯ ನಾಯಕರು, ಉನ್ನತ ಅಧಿಕಾರಿಗಳೂ ಈ ಅಕ್ರಮಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದು ಕೂಡ ಕಂಡುಬರುತ್ತಿರುವುದು ಖಂಡನೀಯ.
ಪಿಎಸ್ಐ, ಸಹಾಯಕ ಪ್ರಾಧ್ಯಾಪಕರ ಮತ್ತು ಇನ್ನುಳಿದ ಹುದ್ದೆಗಳ ನೇಮಕಾತಿಗೆ ನಡೆ ಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಾನೂನು ನಿಯಮಾವಳಿಗಳ ಅನುಸಾರ ನ್ಯಾಯಯುತ ವಾಗಿ, ಪಾರದರ್ಶಕವಾಗಿ ನಡೆದಲ್ಲಿ ಮಾತ್ರ ಅದಕ್ಕೊಂದು ಗೌರವ, ಘನತೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾ ರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಪ್ಪಿತಸ್ಥರು ಎಷ್ಟೇ ದೊಡ್ಡವಾರಗಿರಲಿ, ಎಷ್ಟೇ ಪ್ರಭಾವಶಾ ಲಿಯಾಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸಲು ಅಭಾ ವಿಪ ಸರ್ಕಾರಕ್ಕೆ ಆಗ್ರಹಿಸಿ, ಉಪವಿಭಾಗಾಧಿಕಾ ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅವಿನಾಶ್, ನಗರ ಕಾರ್ಯದರ್ಶಿ ನರೇಂದ್ರ, ಜಿಲ್ಲಾ ಪ್ರಮುಖ ಶಶಾಂಕ್, ನಗರ ಪ್ರಮುಖ ಮೋಹಿತ್, ಕೊಟ್ರೇಶ್, ದೊಡ್ಡೇಶ್, ಆದರ್ಶ ಇನ್ನಿತರರು ಉಪಸ್ಥಿತರಿದ್ದರು.