ಕೊಕ್ಕನೂರು : ಹೊರಬೀರಪ್ಪನ ಗುಡಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಗಿನಲೆ ಶ್ರೀ ಬೇಸರ
ಮಲೇಬೆನ್ನೂರು, ಮೇ 4- ಅಜ್ಞಾನಿಗಳ ಸಹವಾಸದಿಂದಾಗಿ ಪರಂಪರೆಯುಳ್ಳ ಹಾಲುಮತ ಸಮಾಜದ ಸಂಸ್ಕೃತಿಗೆ ದಕ್ಕೆ ಉಂಟಾಗುತ್ತದೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕೊಕ್ಕನೂರು ಗ್ರಾಮದ ಕೆ.ಎನ್ ಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಕ್ಕನೂರು, ಜಿ.ಟಿ. ಕಟ್ಟೆ, ಕಂಬತ್ತನಹಳ್ಳಿ ಗ್ರಾಮಗಳ ಹೊರ ಬೀರಪ್ಪನ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲುಮತ ಸಮಾಜದಲ್ಲಿ ಬೀರಲಿಂಗೇಶ್ವರ ಸ್ವಾಮಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಈ ಜಗತ್ತಿನಲ್ಲಿ ಹಾಲುಮತ ಸಮಾಜಕ್ಕೆ ಮತ್ತೊಂದು ಹೆಸರೇ ಕಟ್ಟುಲಿಂಗವಂತವೆಂದು ಇದ್ದು, ಜಗದ್ಗುರು ರೇವಣಸಿದ್ಧೇಶ್ವರನ ಹಾದಿಯಾಗಿ ಎಷ್ಟು ಬಹು ದೊಡ್ಡ ಪರಂಪರೆ ಈ ಸಮುದಾಯಕ್ಕೆ ಇದೆ. ಆದರೆ ಆ ಪರಂಪರೆಯ ಕಲ್ಪನೆ ನಿಮಗೆ ಗೊತ್ತಿಲ್ಲದ ಕಾರಣ ಅಜ್ಞಾನಿಗಳ ಸಹವಾಸ ಮಾಡಿ ಸಮಾಜದ ಪರಂಪರಗೆ ದಕ್ಕೆ ಬರುವಂತಹ ಕೆಲಸವನ್ನು ನೀವು ಮಾಡುತ್ತಿದ್ದೀರಿ ಎಂದು ಸ್ವಾಮೀಜಿ ಸಮಾಜದವರನ್ನು ಎಚ್ಚರಿಸಿದರು.
ನಮ್ಮ ಹಾಲುಮತದ ಸಮಾಜದಲ್ಲಿ ದೇವಸ್ಥಾನಗಳಿಗೆ ತನ್ನದೇ ಆದ ಪರಂಪರೆ ಸಾಂಸ್ಕೃತಿಕ ಹಿನ್ನೆಲೆ ಇದೆ. ವಿಜಯನಗರ ಸಾಮ್ರಾಜ್ಯವನ್ನು ಸೃಷ್ಟಿಸಿದ ಹಕ್ಕ-ಬುಕ್ಕರು ಅಲ್ಲಿ ಅಂದು ಸ್ಥಾಪಿಸಿದ ಬೀರಪ್ಪನ ಗುಡಿಯೇ ಇಂದಿನ ವಿರೂಪಾಕ್ಷನ ದೇವಸ್ಥಾನವಾಗಿದೆ. ಹಾಗಾಗಿ ಹಾಲುಮತ ಸಮಾಜದ ಪರಂಪರೆಯ ಕುರುಹುಗಳು ಅಲ್ಲಿವೆ ಎಂದು ಶಾಸನಗಳು, ಸಂಶೋಧಕರು ಹೇಳಿದ್ದಾರೆ. ನೀವು ಇವತ್ತು ಮಾಡುವ ಅಜ್ಞಾನಿಗಳ ಸಹವಾಸದಿಂದಾಗಿ ಅಚಾತುರ್ಯ ಕೆಲಸಗಳಿಂದ ಮುಂದೆ ಹಾಲುಮತ ಸಮಾಜಕ್ಕೆ ದಕ್ಕೆ ಆಗಲಿದ್ದು, ನಿಮ್ಮ ಕೀಳರಿಮೆಯಿಂದ ಅಜ್ಞಾನಿಗಳು ನಮ್ಮ ಸಮಾಜದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಈ ಬಗ್ಗೆ ಜನ ಜಾಗೃತರಾಗಬೇಕೆಂದು ಸ್ವಾಮೀಜಿ ಹೇಳಿದರು.
ಹೊರಬೀರಪ್ಪನ ಗುಡಿಯಲ್ಲಿ ಮೂರ್ತಿಗಳು ಇರುವುದಿಲ್ಲ. ಹಿರಿಯರು ಮಾಡಿದಂತೆ ಪಿಂಡಿಕಾ ರೂಪದಲ್ಲಿ ವಿಗ್ರಹಗಳು ಇರುತ್ತವೆ. ನೀವು ಸಂಸ್ಕೃತಿಯನ್ನು ಹಾಳು ಮಾಡದೆ ಉಳಿಸಿ ಎಂದ ಸ್ವಾಮೀಜಿ, ಕನಕ ಗುರು ಪೀಠ ಸ್ಥಾಪನೆಯಾಗಿ 30 ವರ್ಷ ಕಳೆದರೂ ನೀವು ಮಾತ್ರ ಇನ್ನೂ ಇನ್ನೊಬ್ಬರ ಮಾತು ಕೇಳಿ ದಾರಿ ತಪ್ಪು ಕೆಲಸ ಮಾಡುತ್ತಿರುವುದು ನೋವಿನ ಸಂಗತಿ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು.
ಆರೋಗ್ಯಕರ, ಮೂರ್ಖರ ಮಾತನ್ನು ಕೇಳಿದರೆ ನೀವು ಸಮಾಜದ ದ್ರೋಹಿಗಳಾಗುತ್ತೀರಿ. ದೇವಸ್ಥಾನದಲ್ಲಿ ಗಂಟೆ ಭಾರಿಸುವವರು ದೇವರನ್ನು ಕೆಡಿಸುತ್ತಿದ್ದು, ಕೆಲವರು ಫೋನ್ ಪೇ ಮೂಲಕ ದೇವರ ಪ್ರಸಾದ ಕೇಳಿ ದೇವರ ಫೋಟೋವನ್ನು ಹಣ ಕಳುಹಿಸಿದವರಿಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡರು.
ಸಮಾಜದ ಬಂಧುಗಳು ಏನು ಸಾಧನೆ ಮಾಡದಿದ್ದರೂ ಪರವಾಗಿಲ್ಲ, ಆದರೆ ಸಮಾಜದ ಪರಂಪರೆ, ಸಂಸ್ಕೃತಿ ಉಳಿಸಿ, ಬೆಳೆಸಲು ಕೆಲಸ ಮಾಡಿ ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಿವಿಮಾತು ಹೇಳಿದರು.
ಕೊಕ್ಕನೂರು, ಜಿ.ಟಿ ಕಟ್ಟೆ ಮತ್ತಿತರೆ ಗ್ರಾಮಸ್ಥರು ಸೇರಿ ಹೊರಬೀರಪ್ಪನ ಗುಡಿಯನ್ನು ಸುಂದರವಾಗಿ ಕಟ್ಟಿ, ಇದರ ಉದ್ಘಾಟನೆಗೆ 40 ಗ್ರಾಮಗಳಿಂದ ಬೀರ ದೇವರನ್ನು ಕರೆಸಿ ಹೊಸ ಇತಿಹಾಸ ನಿರ್ಮಿಸಿದ್ದೀರಿ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೇ ಹುಬ್ಬಳ್ಳಿಯ ಕುರುಹಿನ ಶೆಟ್ಟಿ ಸಮಾಜದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೊಡ್ಡ ಮನಸ್ಸಿನಿಂದ ಮಾತ್ರ ಇಂತಹ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ದೇವಸ್ಥಾನದಲ್ಲಿ ಬೀರಲಿಂಗೇಶ್ವರ ಚೌಡೇಶ್ವರಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಬಿ.ಪಿ ಹರೀಶ್, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಪಿಎಸ್ಐ ರವಿಕುಮಾರ್, ಜಿ.ಟಿ ಕಟ್ಟೆ ಸಿದ್ದಪ್ಪ, ಕೊಕ್ಕನೂರಿನ ಡಿ.ರಾಮಣ್ಣ, ಕೆ.ಶೇಖರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಸಿ.ಜಯಣ್ಣ ಸ್ವಾಗತಿಸಿದರು. ಕಂಬತ್ತ ಹಳ್ಳಿಯ ಗುರುಪಾದಪ್ಪಗೌಡ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಎನ್.ಜೆ. ನಾಗರಾಜ್ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ದಾಸಪ್ಪ ವಂದಿಸಿದರು.