ಬಸವ ಜಯಂತಿಗೆ ಕಳೆ ತಂದ ಬೃಹತ್ ಮೆರವಣಿಗೆ

ದಾವಣಗೆರೆ, ಮೇ 4- 110ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಬುಧವಾರ ನಗರದಲ್ಲಿ  ಬೃಹತ್ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಮಧ್ಯಾಹ್ನ 3.15ರ ಸುಮಾರಿಗೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ನೇತೃತ್ವದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯ ಆರಂಭದಲ್ಲಿ ಬಸವಣ್ಣನ ಮೂರ್ತಿ ಹೊತ್ತ ಗಜರಾಜ ಗಾಂಭೀರ್ಯದಿಂದ ನಡೆಯುತ್ತಿದ್ದರೆ, ವಿವಿಧ ಬಗೆಯ ಗೊಂಬೆಗಳು, ಚಂಡೆ ಕುಣಿತ, ಕುದುರೆ ಕುಣಿತ, ನಂದಿಕೋಲು, ಮಹಿಳೆಯರ ಹಾಗೂ  ಪುರುಷರ ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ನೀಡಿದ್ದವು.

ಮತ್ತೊಂದೆಡೆ ಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಅಕ್ಕಮಹಾದೇವಿ, ಗಂಗಾಂಬಿಕೆ ಮುಂತಾದ ಶಿವಶರಣರ ವೇಷ ತೊಟ್ಟ ಪುಟಾಣಿಗಳು.  

ಮೈಸೂರು ಮಹಾರಾಜರು, ಭಾರತಾಂಬೆ, ರಾಣಿಚೆನ್ನಮ್ಮ, ಒನಕೆ ಓಬವ್ವ  ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿ, ಅಂಬೇಡ್ಕರ್, ನೆಹರು ಅವರ ವೇಷ ತೊಟ್ಟ ಪುಟಾಣಿಗಳ ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಐರಣಿ ಚಂದ್ರು ಹಾಗೂ ಸಂಗಡಿಗರು ಟ್ರ್ಯಾಕ್ಟರ್‌ನಲ್ಲಿ ಕುಳಿತು ಹಾಡು ಹೇಳುತ್ತಾ ಮೆರವಣಿಗೆಗೆ ಸಾಥ್ ನೀಡಿದರು.

ಬಿರು ಬಿಸಿಲಿನ ನಡುವೆಯೂ ಡೊಳ್ಳಿನ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಮೆರವಣಿಗೆ ಆರಂಭದಲ್ಲಿ ಮಹಿಳೆಯರೂ ನೃತ್ಯಕ್ಕೆ ಹೆಜ್ಜೆ ಹಾಕಿದರು. ಗೊಂಬೆಗಳು ಹಾಗೂ ಕಲಾ ತಂಡಗಳೊಂದಿಗೆ ಜನರು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್
ಎಸ್.ಟಿ. ವೀರೇಶ್ ಹಾಗೂ ಇತರರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿರಕ್ತ ಮಠದಿಂದ ಹೊರಟ ಮೆರವಣಿಗೆಯು ಹೊಂಡದ ವೃತ್ತ, ಅರುಣಾ ವೃತ್ತ, ಪಿ.ಬಿ. ರಸ್ತೆ, ಜಯದೇವ ವೃತ್ತದ ಮೂಲಕ ಶಿವಯೋಗಾಶ್ರಮ ತಲುಪಿತು.  ಜಯದೇವ ವೃತ್ತದಲ್ಲಿ  ಚಿತ್ರದುರ್ಗ ಮುರುಘಾ ಶರಣರು ಮೆರವಣಿಗೆ ವೀಕ್ಷಿಸಿದರು.

error: Content is protected !!