ಜಗಳೂರು, ಮೇ 4- ತಾಲ್ಲೂಕಿನ ಜಮ್ಮಾಪುರ ಸಮೀಪದ ಗುಡ್ಡದಲ್ಲಿ ರಾತ್ರಿ ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಮ್ಯಾಂಗನೀಸ್ ಅದಿರನ್ನು ಬೇರೆಡೆ ಸಾಗಣೆ ಮಾಡಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡಾಗಿದ್ದಾರೆ.
ಕಬ್ಬಿಣದ ಅದಿರಿನ ಕಣಜವಾಗಿರುವ ಗುಡ್ಡದಲ್ಲಿ ಅಕ್ಕಪಕ್ಕದ ಗ್ರಾಮಸ್ಥರಿಗೆ ತಿಳಿಯದಂತೆ ರಾತ್ರಿಯ ಸಮಯದಲ್ಲಿ ತಿಂಗಳಿಂದ ಆಗಾಗ ಹತ್ತಾರು ಹಿಟಾಚಿ, ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ಸಾವಿರಾರು ಟನ್‌ಗಳಷ್ಟು ಅದಿರು ಮತ್ತು ಫಲವತ್ತಾದ ಮಣ್ಣನ್ನು ಗುಡ್ಡದಿಂದ ಬಗೆದು ಹೊರ ತೆಗೆಯಲಾಗಿದೆ. ಹೊರ ತೆಗೆದು ಸಾಗಿಸಿ ಉಳಿದ ಮಣ್ಣನ್ನು ಅಲ್ಲಿಯೇ ಪಕ್ಕದ ಹಳ್ಳದಲ್ಲಿ ಹಾಕಿ ಮುಚ್ಚಲಾಗಿದೆ.
560 ಹೆಕ್ಟೇರ್ ಪ್ರದೇಶದ ಜಮ್ಮಾಪುರ ಗುಡ್ಡ ಅರಣ್ಯ ಇಲಾಖೆಗೆ ಸೇರಿದ್ದು ಮತ್ತು ಭೂವಿಜ್ಞಾನ ಇಲಾಖೆ , ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಪರವಾನಗಿ ಇಲ್ಲದೆ ಎರಡು ತಿಂಗಳುಗಳಿಂದ ಭಾರೀ ಯಂತ್ರಗಳನ್ನು ಬಳಸಿಕೊಂಡು ರಾತ್ರಿ ಸಮಯದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ . ನಿರಂತರ ಅಕ್ರಮ ಗಣಿಗಾರಿಕೆಯಿಂದ ಗುಡ್ಡದ ಪ್ರದೇಶ ರಾತ್ರೋರಾತ್ರಿ ಕರಗಿಹೋಗಿದ್ದು, ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ಗಿಡ ಮರಗಳನ್ನು ನಾಶ ಮಾಡಲಾಗಿದೆ.
ಗಣಿಗಾರಿಕೆಯಿಂದ ಆಸುಪಾಸಿನ ಹತ್ತಾರು ಹಳ್ಳಿಗಳ ಅಂತರ್ಜಲದ ಮೂಲವಾಗಿರುವ ಜಮ್ಮಾಪುರ ಗುಡ್ಡದಲ್ಲಿ ಅಂತರ್ಜಲದ ಮೂಲಗಳು ಬತ್ತುವ ಅಪಾಯವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಮ್ಮಾಪುರ ಗುಡ್ಡದಲ್ಲಿ ಮ್ಯಾಂಗನೀಸ್ ಹಾಗೂ ಕಬ್ಬಿಣದ ಅದಿರು ಲಭ್ಯತೆ ಇದೆ . ಈ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಈಚೆಗೆ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ. ಗಣಿಗಾರಿಕೆಗೆ ಇಲಾಖೆಗಳಿಂದ ಪರವಾನಗಿ ಪಡೆದಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಾಗಿದೆ.
ಕುರುಚಲು ಪರವಾನಗಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ದೂರು ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಕ್ರಮ ಗಣಿಗಾರಿಕೆ ತಡೆಯದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಮ್ಮಾಪುರ ಗ್ರಾಮದ ಯುವ ಮುಖಂಡ ಬಾಲರಾಜ್ ಎಚ್ಚರಿಸಿದ್ದಾರೆ.
ಅರಣ್ಯದಲ್ಲಿ ನೆಲೆ ಕಂಡುಕೊಂಡ ವನ್ಯಪ್ರಾಣಿಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗಿದೆ. 1,500 ಎಕರೆಗೂ ಹೆಚ್ಚು ವಿಸ್ತೀರ್ಣದ ಗುಡ್ಡದ ಪ್ರದೇಶದಲ್ಲಿ ಉತ್ಕೃಷ್ಟ ಗುಣಮಟ್ಟದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದ ಕಾರಣ ತಹಶೀಲ್ದಾರ್ ಸಂತೋಷ್ ಅವರು ಅಕ್ರಮ ಗಣಿಗಾರಿಕೆ ನಡೆದ ಜಮ್ಮಾಪುರ ಗುಡ್ಡಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಅಕ್ರಮ ಗಣಿಗಾರಿಕೆ ಬಗ್ಗೆ ತಾಲ್ಲೂಕು ಆಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ.
ಬಿ.ಪಿ.ಸುಭಾನ್