ಖಾಲಿ ಹುದ್ದೆಗಳಿಗೆ ನೇಮಿಸಿ ಮುಂದುವರೆಸಲು ಒತ್ತಾಯ

ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ, ಏ.4- ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ನೇಮಕ ಮಾಡಿಕೊಂಡಿರುವ ಆರೋಗ್ಯ ಇಲಾಖೆಯ 6463 ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಂಡು ಮುಂದುವರೆಸುವಂತೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕೊರೊನಾ ವಾರಿಯರ್ಸ್, ಪಿಪಿಇ ಕಿಟ್ ಧರಿಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದರು. ನಂತರ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕೋವಿಡ್ ಆತಂಕ ಹುಟ್ಟು ಹಾಕಿದ್ದ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು, ಲ್ಯಾಬ್ ಟೆಕ್ನೀಷಿಯನ್, ಅರಿವಳಿಕೆ ತಜ್ಞರು, ಫಾರ್ಮಾಸಿಸ್ಟ್, ಡೇಟಾ ಎಂಟ್ರಿ ಆಪರೇಟರ್, ಕಿರಿಯ ಮಹಿಳಾ, ಪುರುಷ ಆರೋಗ್ಯ ಸಹಾಯಕರು, ಡಿ ಗ್ರೂಪ್ ಹುದ್ದೆಗಳನ್ನು ಮಾತ್ರವಲ್ಲದೇ, ಹೆಚ್ಚುವರಿ ಹುದ್ದೆಗಳನ್ನು ಸೃಜಿಸಿ ಸರ್ಕಾರ ನೇಮಕ ಮಾಡಿಕೊಂಡಿತ್ತು. ಆದರೆ, ಇದೀಗ ಕೊರೊನಾ ಕಡಿಮೆ ಆಗಿರುವ ಕಾರಣ ಏಕಾಏಕಿ ನಮ್ಮನ್ನು ತೆಗೆದುಹಾಕಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೊರೊನಾ ವಾರಿಯರ್ಸ್ ಆದ ತಮ್ಮನ್ನು ಸೇವೆಯಲ್ಲಿ ಮುಂದುವರೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬಾಕಿ ಉಳಿಸಿಕೊಂಡ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು, ಸರ್ಕಾರ ಘೋಷಿಸಿದ ಕೋವಿಡ್ ವಿಶೇಷ ಪ್ರೋತ್ಸಾಹ ಧನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ  ಆಗ್ರಹಿಸಿದರು.

ನಮ್ಮ ಸಂಘಟನೆಯಿಂದ ಮಾರ್ಚ್‍ನಲ್ಲಿ ಮನವಿ ಸಲ್ಲಿಸಿದ್ದಾಗ  ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದ್ದಿಸಿದ್ದರು. ಆರೋಗ್ಯ ಇಲಾಖೆಯಲ್ಲೇ ನಮ್ಮನ್ನು ಮುಂದುವರೆಸಲು ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ, ಮಾ.31ರಂದು ನಮ್ಮನ್ನು ಮುಂದುವರಿಸಲಾಗದು ಎಂಬ ಇಲಾಖೆ ಆದೇಶ ಹೊರಡಿಸಿ, ನಮ್ಮನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ನಮ್ಮ ಬದುಕು ಅತಂತ್ರವಾಗಿದೆ. ಕಾರಣ ಕೂಡಲೇ ಸರ್ಕಾರ ನಮ್ಮನ್ನು ಮತ್ತೆ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪದ್ಮರಾಜ, ಪ್ರಮೋದ, ಪವನ್, ಟಿ.ಸಿ.ಮಂಜುನಾಥ, ಶಿವರಾಜ, ನಾಗರಾಜ, ನಟರಾಜ, ಬಸವರಾಜ, ರೇಣುಕಾ, ನೀಲಾಬಾಯಿ, ಪುನೀತ, ಷಫೀ, ನವೀನ, ತೌಫಿಕ್, ಮಂಜುಳಾ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!