ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ : ತರಳಬಾಳು ಶ್ರೀ

ರಾಣೇಬೆನ್ನೂರು,ಏ.3- ಮನುಷ್ಯ ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು. 

ದಂಡಿಗಿಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಲಾಗಿದ್ದ ಧರ್ಮಸಭೆ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. 

ಮನುಷ್ಯನನ್ನು ಎಲ್ಲಾ ಪ್ರಾಣಿಗಳಿಗೆ ಹೋಲಿಕೆ ಮಾಡಲಾಗುತ್ತದೆ. ಆದರೆ ಆತನಲ್ಲಿ ಪ್ರಾಣಿಗಳಿಂತ ಕೆಟ್ಟ ಗುಣಗಳಿದ್ದು, ಅತ್ಯಂತ ಕ್ರೂರಿಯಾಗಿದ್ದಾನೆ. ನೈತಿಕ ಮಾರ್ಗದಲ್ಲಿ ಸಾಗುವುದೇ ಧರ್ಮ. ಕಲಿಯುಗದಲ್ಲಿಯೂ ಒಳ್ಳೆಯ ಜನರಿದ್ದಾರೆ. ಹೃದಯ ಮತ್ತು ಬುದ್ಧಿ ನಡುವೆ ನಿರಂತರ ಸಂಘರ್ಷ ನಡೆಯುತ್ತಿರುತ್ತದೆ. ನಮ್ಮ ಶರೀರ ಕಸದ ಬುಟ್ಟಿಯಾಗಬಾರದು. ನಮ್ಮೊಳಗಿನ ಆತ್ಮಕ್ಕೆ ಉತ್ತಮ ಸಂಸ್ಕಾರ ನೀಡಬೇಕು, ಶರಣರ ಮಾತುಗಳನ್ನು ಆಚರಣೆಗೆ ತರಬೇಕು ಎಂದರು. 

ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ಜ್ಞಾನವೆಂಬ ತುಂಬಿದ ಕೊಡವಾಗಬೇಕು. ನಾವು ಮಾಡಿದ ಪುಣ್ಯ ನಮ್ಮನ್ನು ಜೀವನದುದ್ದಕ್ಕೂ ಕಾಪಾಡುತ್ತದೆ. ಶಿಲ್ಪಿ ಕೆತ್ತಿದ ಕಲ್ಲಿಗೆ ಸಂಸ್ಕಾರ ನೀಡಿದಾಗ ದೇವರ ಮೂರ್ತಿಯಾಗುತ್ತದೆ. ಮನುಷ್ಯ ತಾನು ಮಾಡಿದ ತಪ್ಪು, ಅಪರಾಧಗಳನ್ನು ದೇವರ ಸಾನ್ನಿಧ್ಯದಲ್ಲಿ ಮಾತ್ರ ಹಂಚಿಕೊಳ್ಳುತ್ತಾನೆ ಎಂದರು. 

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮಾತನಾಡಿ, ನಮ್ಮ ದೇಶದಲ್ಲಿ ಅನ್ನ ಕೊಡುವ ತಾಕತ್ತು ರೈತರಿಗೆ ಮಾತ್ರ ಇದ್ದು, ಯಾವುದೇ ಉದ್ಯಮಿಗಳಿಗಿಲ್ಲ. ಆದರೆ ದೇಶದಲ್ಲಿ ಕೃಷಿ ಅಭಿವೃದ್ಧಿಯಾಗುತ್ತಿದೆಯೇ ಹೊರತು, ಕೃಷಿಕರು ಅಭಿವೃದ್ಧಿ ಹೊಂದುತ್ತಿಲ್ಲ. ಕೃಷಿಯಲ್ಲಿ ಬದಲಾವಣೆ ತರದೇ ಕೃಷಿಕರು ಅಭಿವೃದ್ಧಿಯಾಗಲು ಅಸಾಧ್ಯ. ರೈತರು ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಹೊಂದುವಂತಾಗಬೇಕು. ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಿದಲ್ಲಿ ಅಧಿಕ ಲಾಭ ಹೊಂದಿ, ಆದಾಯ ದ್ವಿಗುಣಗೊಳ್ಳಲು ಸಾಧ್ಯ. ಪ್ರಧಾನಿ ಮೋದಿ ಅವರು ಆತ್ಮನಿರ್ಭರ್‌ ಯೋಜನೆಯಡಿ ಸಣ್ಣಪುಟ್ಟ ಕೈಗಾರಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಸಾಲಸೌಲಭ್ಯ ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ  ರೈತರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದೆ. ರೈತರಿಗೆ ಸಬ್ಸಿಡಿ ರೂಪದಲ್ಲಿ ಡೀಸೆಲ್ ಪೂರೈಕೆ ಮಾಡುತ್ತಿದೆ ಎಂದರು. 

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕ ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, ಕೆಪಿಸಿಸಿ ಸದಸ್ಯ ಪ್ರಕಾಶ ಕೋಳಿವಾಡ ಮಾತನಾಡಿದರು. 

ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹಾಲನಗೌಡ ಮುಂದಿನಮನಿ ಅಧ್ಯಕ್ಷತೆ ವಹಿಸಿದ್ದರು.  

ಸಾಧು ವೀರಶೈವ ಸಮಾಜ ಅಧ್ಯಕ್ಷ ಶಿವಣ್ಣ ನಂದಿಹಳ್ಳಿ, ರಟ್ಟಿಹಳ್ಳಿ ಸಾಧು ವೀರಶೈವ ಸಮಾಜದ ಅಧ್ಯಕ್ಷ ಮಾಲತೇಶ ಗಂಗೋಳ, ಗುತ್ತಿಗೆದಾರ ರುದ್ರಗೌಡ್ರ ಗಂಗೋಳ, ಮಂಜನಗೌಡ ಪಾಟೀಲ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ವಿಜಯಕುಮಾರ ಚೌಡಣ್ಣನವರ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡ ಶಿವಣ್ಣನವರ, ಈರಣ್ಣ ಮಾಕನೂರ, ರಾಯಣ್ಣ ಮಾಕನೂರ, ಸಿದ್ದನಗೌಡ ಮುದಿಗೌಡ್ರ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

error: Content is protected !!