ಅಮರಾವತಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ
ಹರಿಹರ, ಏ.3 – ಸರ್ಕಾರ ಯುಗಾದಿ ಹಬ್ಬವನ್ನು ಧಾರ್ಮಿಕ ಮತ್ತು ರೈತರ ದಿನವಾಗಿ ಆದೇಶ ಮಾಡಿದ್ದರಿಂದ, ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ರೈತರ ಎತ್ತುಗಳಿಗೆ ವಿಶೇಷ ಪೂಜೆ ಮಾಡಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ರೈತರ ಬದುಕು ಉತ್ತಮವಾಗಿ ಸಾಗಲಿ ಎಂದು ಹಾರೈಸುವೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಬೀಳಗಿ ಅವರು ಶ್ರೀ ಹರಿಹ ರೇಶ್ವರ ದೇವಸ್ಥಾನದಲ್ಲಿ ದಂಪತಿ ಸಮೇತವಾಗಿ ವಿಶೇಷ ಪೂಜೆ ಮತ್ತು ಅಮರಾವತಿ ಗ್ರಾಮದ ರೈತಾಪಿ ವರ್ಗದವರು ಜಮೀನಿನಲ್ಲಿ ಶೃಂಗಾರ ಮಾಡಿದ ಎತ್ತುಗಳನ್ನು ಪೂಜಿಸಿ ರಂಟೆಯನ್ನು ಹೊಡೆದು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರ ಬದುಕು ಚೆನ್ನಾಗಿ ಇರಬೇಕು ಎಂದು ಅನೇಕ ಯೋಜನೆಗಳ ಜಾರಿಗೆ ತಂದಿದ್ದು, ಯುಗಾದಿ ಹಬ್ಬದ ಸಮಯದಲ್ಲಿ ರೈತರು ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸುವುದರಿಂದ ಅವರ ಬದುಕು ಹಸನಾಗುವ ದೃಷ್ಟಿಯಿಂದ, ಇವತ್ತಿನ ದಿನವನ್ನು ಸರ್ಕಾರ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಿಂದ ರೈತರಿಗೆ ಇನ್ನಷ್ಟು ಬಲ ಬಂದತಾಗಿದೆ ಮತ್ತು ಜಿಲ್ಲೆಯ ಎಲ್ಲಾ ರೈತರ ಬದುಕು ಉತ್ತಮ ದಾರಿಯತ್ತ ಸಾಗಲಿ ಎಂದು ಆಶಿಸಿದರು.
ಅಮರಾವತಿ ಗ್ರಾಮದ ರೈತರು ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಮಾಡಿಕೊಂಡಿದ್ದರು. ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಕಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಎಸ್. ರಾಮಪ್ಪ ಮಾತನಾಡಿ, ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ತಿಳಿಸಲಾಗಿದೆ. ರಾಜ್ಯ ಸರ್ಕಾರ ಬೇಗನೆ ರಾಗಿ ಖರೀದಿ ಕೇಂದ್ರ ತೆರೆಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಎಪಿಎಂಸಿ ಮಾಜಿ ನಿರ್ದೇಶಕ ಹೆಚ್. ನಾಗರಾಜ್, ಹೆಚ್. ಪಾಲಾಕ್ಷಪ್ಪ, ಜೆಟ್ಟೆಪ್ಪ ಮಾತನಾಡಿ, ರಾಗಿ ಬೆಳೆಗೆ ಮಾರುಕಟ್ಟೆಯಲ್ಲಿ 1900 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಸರ್ಕಾರದ ಖರೀದಿ ಕೇಂದ್ರದಲ್ಲಿ 3377 ರೂಪಾಯಿಗೆ ಖರೀದಿ ಮಾಡುತ್ತದೆ. ಆದರೆ ರಾಗಿ ಖರೀದಿ ಕೇಂದ್ರ ಜನವರಿ 22 ರಂದು ಸ್ಥಗಿತವಾಯಿತು. ಕೂಡಲೇ ರಾಗಿ ಖರೀದಿ ಕೇಂದ್ರವನ್ನು ಸ್ಥಾಪಿಸಲು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಹೆಚ್. ನಾಗರಾಜ್, ಹೆಚ್. ಜಟ್ಟೆಪ್ಪ, ಹೆಚ್.ಬಿ. ನಾಗರಾಜ್, ಹಚ್.ಎಂ. ರಾಜಕುಮಾರ್, ಕರೂರು ಮಲ್ಲಿಕಾರ್ಜುನ, ಗೌಡ್ರು ಸುರೇಶ್, ತಿರುಕಪ್ಪ, ಹಂಚಿನಮನೆ ಸಿದ್ದಪ್ಪ, ಬೆಟ್ಟಪ್ಪರ ಮಲ್ಲೇಶಪ್ಪ, ಎ.ಬಿ. ಬಸವರಾಜ್, ಸಿರಿಗೆರೆ ಉಮಾಕಾಂತ್, ಎಸ್. ಶಿವಪ್ಪ, ಹೆಚ್.ಪಾಲಾಕ್ಷಪ್ಪ, ಕೆ. ಚೆನ್ನಪ್ಪ, ಕೆ. ಹೊನ್ನಪ್ಪ, ಕೆ. ಗೌಡಪ್ಪ, ಹೆಚ್.ಎಂ. ಸುರೇಶ್, ಹೆಚ್. ಉಜ್ಜಪ್ಪ, ಶಿವಮೂರ್ತಿ, ಹೆಚ್. ಮಲ್ಲಿಕಾರ್ಜುನ, ಗೌಡ್ರು ಲಿಂಗರಾಜ್, ನವೀನ, ಕೆ.ಹೆಚ್. ಹನುಮಂತಪ್ಪ ಶಿಕ್ಷಕ, ಅಜ್ಜಪ್ಪ, ಚಂದ್ರಪ್ಪ, ಭರತ್ ಹಾಗೂ ಇತರರು ಹಾಜರಿದ್ದರು.