ಜಿಲ್ಲೆಯಾದ್ಯಂತ ಬೆಲೆಯೇರಿಕೆ ಮುಕ್ತ ಭಾರತ ಆಂದೋಲನ

ಬೆಲೆಯೇರಿಕೆ ವಿರುದ್ಧ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ, ಏ. 3- ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಯಾದ್ಯಂತ ಬೆಲೆಯೇರಿಕೆ ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ನೇತೃತ್ವದಲ್ಲಿ ಅಡುಗೆ ಸಿಲಿಂಡರ್ ಗಳಿಗೆ ಮತ್ತು ವಾಹನಗಳಿಗೆ ಹೂವಿನ ಮಾಲೆ ಹಾಕಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ದಿನೇಶ್ ಕೆ. ಶೆಟ್ಟಿ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್‍ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಪ್ರತಿ ಲೀಟರ್‍ಗೆ 6.40 ರೂ.ನಷ್ಟು ಹೆಚ್ಚಳವಾಗಿದೆ. ಸ್ಥಳೀಯ ತೆರಿಗೆಯನ್ನು ಅವಲಂಬಿಸಿ, ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿದ್ದು, ಮಾರ್ಚ್ 22ರ ನಂತರ ಸತತ 9 ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಬೆಲೆಯೇರಿಕೆ ಮುಕ್ತ ಭಾರತ ಆಂದೋಲನದಡಿ ಇಂಧನ, ಅಡುಗೆ ಅನಿಲ ಸೇರಿದಂತೆ, ಹಣದುಬ್ಬರದ ವಿರುದ್ಧ ಕಾಂಗ್ರೆಸ್ ವಾರದವರೆಗೆ ದೇಶಾದ್ಯಂತ ಪ್ರತಿಭಟನೆ ಕೈಗೊಳ್ಳಲಿದ್ದು, ದಾವಣಗೆರೆ ಜಿಲ್ಲೆಯಲ್ಲೂ ಸಹ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮುಂಭಾಗದಲ್ಲಿ ಅಡುಗೆ ಅನಿಲ ಸಿಲಿಂಡರ್ ಇಟ್ಟು ಜಾಗಟೆ ಭಾರಿಸುವ ಮೂಲಕ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಸದಸ್ಯ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್. ಬಸಾಪುರ, ಹಿಂದುಳಿದ ಘಟಕದ ಜಮ್ನಳ್ಳಿ ನಾಗರಾಜ್, ಮುಖಂಡರುಗಳಾದ ವಿಜಯ್ ಜೈನ್, ರಾಜು ಭಂಡಾರಿ, ಶ್ರೀಕಾಂತ್ ಬಗೇರ, ಎಸ್. ರವಿ, ಗೋಪಾಲ್, ಯುವರಾಜ್, ಸತೀಶ್ ರಾಜ್, ಕವಿತಾ, ಮಹಿಳಾ ಕಾಂಗ್ರೆಸ್‍ನ ದ್ರಾಕ್ಷಾಯಣಮ್ಮ, ರಾಜೇಶ್ವರಿ, ನಾಗರತ್ನಮ್ಮ, ಶುಭಮಂಗಳ ಮತ್ತಿತರರಿದ್ದರು.

error: Content is protected !!