ಲಿಂ. ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠ ಕಟ್ಟಿ ಬೆಳೆಸಿದ ಮಹಾ ತಪಸ್ವಿ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಶ್ಲ್ಯಾಘನೆ

ಹರಪನಹಳ್ಳಿ, ಏ.3- ಲಿಂ. ಶ್ರೀ ಪುಣ್ಯಾನಂದ ಪುರಿ ಮಹಾ ಸ್ವಾಮೀಜಿಯವರು ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠವನ್ನು ಕಟ್ಟಿ ಬೆಳೆಸಿ,  ರಾಜ್ಯದ ವಾಲ್ಮೀಕಿ ನಾಯಕ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ  ಮಹಾ ತಪಸ್ವಿ ಎಂದು ಕರ್ನಾಟಕ ಲೋಕ ಸೇವಾ ಅಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಶ್ಲ್ಯಾಘಿಸಿದರು.

ಪಟ್ಟಣದ ತರಳಬಾಳು ಕಲ್ಯಾಣ  ಮಂಟಪದಲ್ಲಿ  ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಇಂದು ಆಯೋಜಿಸಿದ್ದ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಥಮ ಪೀಠಾಧಿಪತಿ ಲಿಂ.  ಪರಮಪೂಜ್ಯ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರ 15 ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದುಳಿದ ವಾಲ್ಮೀಕಿ ನಾಯಕ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಪ್ರವಾಸ ಮಾಡಿ ಸಮಾಜದಲ್ಲಿ ಜಾಗೃತಿ ಮಾಡಲು ಶ್ರಮಿಸಿದ್ದರು. ಈಗ  ರಾಜನಹಳ್ಳಿಯ  ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು  ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇ. 7.5 ಮೀಸಲಾತಿ  ಹೆಚ್ಚಳ ಸೇರಿದಂತೆ,  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಬೆಂಗಳೂರಿನ  ಫ್ರೀಡಂ ಪಾರ್ಕ್‌ನಲ್ಲಿ ಕೈಗೊಂಡಿರುವ ಧರಣಿ ಸತ್ಯಾಗ್ರಹ 53 ದಿನಗಳು ಕಳೆದರೂ  ಬಿಜೆಪಿ ನೇತೃತ್ವದ  ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿಗೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ  ತಾರತಮ್ಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ, ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಆಲದಹಳ್ಳಿ ಷಣ್ಮುಖಪ್ಪ ಮಾತನಾಡಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂವಿಧಾನಿಕ ಹಕ್ಕಾಗಿದ್ದು ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಬಂದ ತಕ್ಷಣ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ನಮ್ಮನ್ನು ನಂಬಿಸಿ, ಯಡಿಯೂರಪ್ಪ ಕೈಕೊಟ್ಟರು. ಈಗಿನ ಸರ್ಕಾರ ಆ ವರದಿಯನ್ನು ಸುಭಾಷ್ ಆಡಿ ನೇತೃತ್ವದ ಉಪಸಮಿತಿಗೆ ನೀಡಿ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ 4ನೇ ಅತಿ ದೊಡ್ಡ ಸಮಾಜವಾದ ವಾಲ್ಮೀಕಿ ನಾಯಕರ ಜನಸಂಖ್ಯೆ 50 ಲಕ್ಷ ಇದ್ದು, ಸರ್ಕಾರ ಶೇ.7.5 ಮೀಸಲಾತಿಯನ್ನು  ನೀಡಲೇಬೇಕು ಇಲ್ಲವಾದರೆ ನಮ್ಮ ಸಮಾಜದ ಶಕ್ತಿಯನ್ನು  ನಿಮಗೆ ತೋರಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ   ಎಂದರು.

ಮಹರ್ಷಿ ವಾಲ್ಮೀಕಿ, ಮದಕರಿ ನಾಯಕ ಸೇರಿದಂತೆ ರಾಜ್ಯದ 77 ಪಾಳೇಗಾರರು ಸಮಾಜ ಕಟ್ಟುವಲ್ಲಿ ಶ್ರಮ ಪಟ್ಟಿದ್ದಾರೆ. ಪ್ರತಿ ರಾಜರ ಹಿಂದೆ ವಾಲ್ಮೀಕಿ ನಾಯಕರ, ಬೇಡರ ಶ್ರಮವಿದೆ. ಸಮಾಜದ ಮೀಸಲಾತಿಯಿಂದ  ಚುನಾಯಿತರಾದ ವಾಲ್ಮೀಕಿ ನಾಯಕ ಸಮಾಜದ ಶಾಸಕರು, ಸಂಸದರು ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ಹೋರಾಟಕ್ಕೆ  ಇಳಿಯಬೇಕು. ಹಾಗಾದರೆ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷರುಗಳಾದ ನಿಚ್ಚವನಹಳ್ಳಿ ಕೆ.ಪರಶುರಾಮಪ್ಪ,  ಶಿರಹಟ್ಟಿ ದಂಡ್ಯಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಜಿ.ಕೆ.ಬಸವರಾಜ್, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ಟಿ.ಪದ್ಮಾವತಿ, ಸದಸ್ಯರಾದ ಕೆ.ದ್ರಾಕ್ಷಾಯಣಮ್ಮ, ಮಂಜುಳಾ, ಪವಿತ್ರ, ವಕೀಲರಾದ ಜಿಟ್ಟಿನಕಟ್ಟಿ ಮಂಜುನಾಥ್, ಉಪನ್ಯಾಸಕರುಗಳಾದ ಕೊಟ್ರೇಶ್, ರವಿಕುಮಾರ್ ಸೇರಿದಂತೆ ಇತರರು ಇದ್ದರು.

error: Content is protected !!