ದಾವಣಗೆರೆ-ಹರಿಹರ ಅರ್ಬನ್ ಸಹಕಾರಿಗೆ 8.60 ಕೋಟಿ ರೂ. ಲಾಭ

ದಾವಣಗೆರೆ-ಹರಿಹರ ಅರ್ಬನ್ ಸಹಕಾರಿಗೆ 8.60 ಕೋಟಿ ರೂ. ಲಾಭ - Janathavaniಸುವರ್ಣ ಮಹೋತ್ಸವದ ಸಂಭ್ರಮದಲ್ಲಿ

ನಮ್ಮ ಬ್ಯಾಂಕ್ ಈ ವರ್ಷ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ಸವಿ ನೆನಪಿಗಾಗಿ ಬ್ಯಾಂಕಿನ ಷೇರುದಾರರಿಗೆ ಶೇ. 20 ರಂತೆ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ಚಿಂತಿಸಿದ್ದು, ಈ ಬಗ್ಗೆ ಬರುವ ಮಹಾಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. 

– ಎನ್.ಎ. ಮುರುಗೇಶ್, ಅಧ್ಯಕ್ಷರು

ದಾವಣಗೆರೆ, ಏ.3- ಸುವರ್ಣ ಮಹೋತ್ಸವದ ಸಂಭ್ರ ಮದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್, 2022 ಮಾರ್ಚ್ ಅಂತ್ಯಕ್ಕೆ 8.62 ಕೋಟಿ ರೂ. ಲಾಭ ಗಳಿಸಿರುವ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಮುರುಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2021-22ನೇ ಸಾಲಿನಲ್ಲಿ ಆದಾಯ ತೆರಿಗೆ 1.74 ಕೋಟಿ ರೂ. ಮತ್ತು ಇತರೆ ಅವಕಾಶ 1.84 ಕೋಟಿ ರೂ. ಕಲ್ಪಿಸಿದ ನಂತರ 5.04 ಕೋಟಿ ರೂ. ನಿವ್ವಳ  ಲಾಭ ಗಳಿಸಿದ್ದು, ಇದು ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ಗಣನೀಯವಾಗಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ತಿಳಿಸಿದ್ದಾರೆ.

5.44 ಕೋಟಿ ರೂ. ಷೇರು ಬಂಡವಾಳ, 50.06 ಕೋಟಿ ರೂ. ಕಾಯ್ದಿಟ್ಟ ಮತ್ತು ಇತರೆ ನಿಧಿಗಳಾಗಿದ್ದು, 307.18 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 250.19 ಕೋಟಿ ರೂ. ಸಾಲ ಮತ್ತು ಮುಂಗಡಗಳನ್ನು ನೀಡಲಾಗಿದೆ. ಬ್ಯಾಂಕಿನ ಅಳತೆಗೋಲಿನ ಎನ್.ಪಿ.ಎ ಆಗಿದ್ದು, ಇದನ್ನು ಕಡಿಮೆ ಮಾಡುವಲ್ಲಿ ಶ್ರಮ ವಹಿಸಿ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಮಾಣದೊಳಗೆ ತರುವಲ್ಲಿ ತಮ್ಮ ಬ್ಯಾಂಕ್ ಯಶಸ್ವಿಯಾಗಿದೆ. ಬ್ಯಾಂಕಿನ ನಿವ್ವಳ ಎನ್.ಪಿ.ಎ ಶೇ.2.16 ರಷ್ಟಿದೆ ಎಂದು ಅವರು ಹೇಳಿದ್ದಾರೆ. 

ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಗ್ರಾಹಕರ ಮತ್ತು ಸದಸ್ಯರ ಪ್ರೋತ್ಸಾಹ, ಕಾರ್ಯಕಾರಿ ಮಂಡಳಿ ಸದಸ್ಯರ ಸಲಹೆ – ಸಹಕಾರ, ಸಿಬ್ಬಂದಿ ವರ್ಗದವರ ಶ್ರಮದಿಂದಾಗಿ ಬ್ಯಾಂಕ್ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕಿನ ಸದಸ್ಯರುಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಮೃತರ ವಾರಸುದಾರರಿಗೆ 1 ಲಕ್ಷ ರೂ. ಅಪಘಾತ ವಿಮೆ ಪರಿಹಾರ ಸಿಗುವಂತೆ ವಿಮೆ ಮಾಡಿಸಲಾಗಿದೆ. ಕೇವಲ ಮರಣ ಹೊಂದಿದವರಿಗೆ ಮಾತ್ರವಲ್ಲದೇ, ಅಂಗಾಂಗಗಳು ಭಾಗಶಃ ಶಾಶ್ವತ ಊನವಾದರೆ ಅಪಘಾತ ವಿಮೆ ದೊರೆಯಲಿದೆ. ಸದಸ್ಯರು ಮೃತಪಟ್ಟಲ್ಲಿ ಅವರ ಶವ ಸಂಸ್ಕಾರಕ್ಕೆ 10 ಸಾವಿರ  ರೂ.ಗಳನ್ನು ಅವರ ವಾರಸುದಾರರಿಗೆ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 172 ಸದಸ್ಯರಿಗೆ 17.15 ಲಕ್ಷ ರೂ. ನೀಡಲಾಗಿದೆ.

ಕರ್ನಾಟಕ ಸರ್ಕಾರವು ಯಶಸ್ವಿನಿ ವಿಮೆ ಯೋಜನೆಯನ್ನು ಮತ್ತೆ ಜಾರಿ ಮಾಡಲು ಉದ್ದೇಶಿಸಿದ್ದು, ಇದು ಜಾರಿಗೆ ಬಂದಲ್ಲಿ, ತಮ್ಮ ಬ್ಯಾಂಕಿನ ಸದಸ್ಯರಿಗೂ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ಬ್ಯಾಂಕಿನ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ `ಗ್ರೂಪ್ ಹೆಲ್ತ್ ಇನ್ಸೂರೆನ್ಸ್’ ಮಾಡಿಸಲಾಗಿದೆ ಎಂದು ಅವರು ಹೇಳಿದರು.

ಬ್ಯಾಂಕಿನ ಸದಸ್ಯರು ಆರೋಗ್ಯದ ದೃಷ್ಟಿಯಿಂದ ಸ್ಥಾಪಿಸಿರುವ ಆರಾಧ್ಯ ಆಯುಸ್ಮಾನ್ ನಿಧಿಯಿಂದ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ಸದರಿ ಸಾಲಿನಲ್ಲಿ 73 ಸದಸ್ಯ ಫಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ 9.39 ಲಕ್ಷ ರೂ.ಗಳನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ನೇರವಾಗಿ ಪಾವತಿಸಲಾಗಿದೆ.

ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರಿಗೆ ಶೀಘ್ರ ಸೇವೆ ಒದಗಿಸುವ ನಿಟ್ಟಿನಲ್ಲಿ ಎಟಿಎಂ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಬ್ಯಾಂಕಿನ ಆಡಳಿತ ಕಚೇರಿ ಮುಂಭಾಗದಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಗ್ರಾಹಕರ ಸೇವೆಗೆ ಸಮರ್ಪಿಸಲಾಗುವುದು. ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಜ್ ಮಾಡುವ ಉದ್ದೇಶ ಹೊಂದಿದ್ದು, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 

ಬ್ಯಾಂಕಿನ ಆಡಳಿತ ಕಚೇರಿ ಮತ್ತು ಹರಿಹರ ಶಾಖೆಯ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ಬ್ಯಾಂಕಿನ ವಿದ್ಯುತ್ಚಕ್ತಿ ವೆಚ್ಚವನ್ನು ಕಡಿತಗೊಳಿಸಿದಂತಾಗಿದೆ ಎಂದು ಮುರುಗೇಶ್ ವಿವರಿಸಿದ್ದಾರೆ.

ತಮ್ಮ ಬ್ಯಾಂಕ್ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಶೀಘ್ರದಲ್ಲೇ ಆಚರಿಸಲು ಉದ್ದೇಶಿಸಲಾಗಿದ್ದು, ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಬ್ಯಾಂಕಿನ ಆಡಳಿತ ಕಚೇರಿ ಮತ್ತು ಆಡಳಿತ ಕಚೇರಿ ಹೊಂದಿಕೊಂಡಿರುವ ಸಿಒಎಂ ಶಾಖೆಯ ಒಳಾಂಗಣವನ್ನು ಸಂಪೂರ್ಣ ಅತ್ಯಾಧುನಿಕವಾಗಿ ನವೀಕರಿಸಲಾಗುತ್ತಿದೆ. ಅಲ್ಲದೇ ಈ ಸಂಭ್ರಮದ ನೆನಪಿಗಾಗಿ ತಮ್ಮ ಬ್ಯಾಂಕಿನ ಸದಸ್ಯರಿಗೆ ಹೆಚ್ಚಿನ ಪ್ರಮಾಣದ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕಿನ ಸುವರ್ಣ ಮಹೋತ್ಸವದ ಕ್ಯಾಷ್ ಸರ್ಟಿಫಿಕೇಟ್ ಯೋಜನೆಯನ್ನು 2021 ಡಿಸೆಂಬರ್‌ನಿಂದ ಜಾರಿಗೆ ತರಲಾಗಿದ್ದು, 2022 ಜನವರಿ ವೇಳೆಗೆ ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರಿಗೆ ಸದರಿ ಠೇವಣಿ ಯೋಜನೆಯಲ್ಲಿ ಶೇ.7.50 ರಷ್ಟು ಬಡ್ಡಿಯನ್ನು ನೀಡಲಾಗಿದೆ. ಈ ಯೋಜನೆಯಲ್ಲಿ ಕೇವಲ 2 ತಿಂಗಳಲ್ಲಿ 22 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಇದು ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿನ ಮೇಲಿಟ್ಟಿರುವ ದೃಢವಾದ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ವೀರಣ್ಣ, ನಿರ್ದೇಶಕರುಗಳಾದ ರಮಣ್ ಲಾಲ್ ಪಿ.ಸಂಘವಿ, ಕಿರುವಾಡಿ ವಿ. ಸೋಮಶೇಖರ್, ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶಂಕರ್ ಖಟಾವ್ ಕರ್, ಎಸ್.ಕೆ. ಪ್ರಭು ಪ್ರಸಾದ್, ಶ್ರೀಮತಿ ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ.ನಾಗೇಂದ್ರಚಾರಿ, ಶ್ರೀಮತಿ ಅನಿಲ ಇಂದೂಧರ್ ನಿಶಾನಿಮಠ, ಎ.ಕೊಟ್ರೇಶ್, ಶ್ರೀಮತಿ ಉಮಾ ವಾಗೇಶ್. 

ವೃತ್ತಿಪರ ನಿರ್ದೇಶಕರುಗಳಾದ ಆರ್.ವಿ. ಶಿರಸಾಲಿಮಠ್, ಕಿರಣ್ ಶೆಟ್ಟಿ, ವಿಶೇಷ ಆಹ್ವಾನಿತರಾದ ಜಿ.ಕೆ. ವೀರಣ್ಣ, ಕೆ.ಹೆಚ್. ಶಿವಯೋಗಪ್ಪ, ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಕೆ.ಎಂ. ಬಸವರಾಜ್, ಶ್ರೀಮತಿ ಜೆ.ಸಿ. ವಸುಂಧರಾ, ಶ್ರೀಮತಿ ಕೆ.ಎಂ. ಶೈಲಾ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಸಭೆಯ ಕಾರ್ಯಕಲಾಪವನ್ನು ನಿರ್ವಹಿಸಿದರು.

error: Content is protected !!