ದಾವಣಗೆರೆ, ಮಾ.19- ಸರ್ಕಾರ ರೈತರಿಗೆ ಪಶುಸಂಗೋಪನೆ ಕುರಿತು ಅರಿವು ಮೂಡಿಸಲು ಹಾಗೂ ಅವರ ಆದಾಯ ಹೆಚ್ಚಿಸುವ ಸಲುವಾಗಿ ರೈತರಿಗೋಸ್ಕರ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದು ಕೊಂಡು ವೈಜ್ಞಾನಿಕವಾಗಿ ಹೈನುಗಾರಿಕೆ, ಕುರಿ ಮತ್ತು ಮೇಕೆ ಹಾಗೂ ಕೋಳಿ ಸಾಕಾಣಿಕೆ ಮಾಡಬೇಕೆಂದು ಹೆಸರುಘಟ್ಟ ಪಶುಸಂಗೋಪನಾ ಉತ್ಕೃಷ್ಟತಾ ಕೇಂದ್ರದ ಜಂಟಿ ಆಯುಕ್ತ ಡಾ. ಹೆಚ್. ತೆಗ್ಗಿ ತಿಳಿಸಿದರು.
ಇಲ್ಲಿನ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಸಂಗೋಪನಾ ಶ್ರೇಷ್ಠತೆಯ ಕೇಂದ್ರ, ಭಾರತ ಸರ್ಕಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹಾಗೂ ಶಿವಮೊಗ್ಗ ಹಾಲು ಉತ್ಪಾದಕ ಸಹಕಾರಿ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ಮೂರು ದಿನಗಳ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶು ವಿಷಯ ತಜ್ಞ ಡಾ. ಜಯದೇವಪ್ಪ ಜಿ.ಕೆ. ಮಾತನಾಡಿ, ಜಾನುವಾರುಗಳಿಗೆ ಗುಣಮಟ್ಟದ, ಪೌಷ್ಟಿಕವಾದ ಮೇವಿನ ಬಳಕೆ ಮತ್ತು ಸುಧಾರಿತ ಮೇವು ಉತ್ಪಾದನೆ ಮಾಡಲು ಶೇ. 15 ರಷ್ಟು ಜಮೀನನ್ನು ಮೀಸಲಿಡಲು ತಿಳಿಸಿದರು.
ಶಿವಮೊಗ್ಗ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಸ್ಮಿತಾ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೈನುಗಾರಿಕೆ ಮಾಡಲು ಸಲಹೆ ನೀಡಿದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ತಾಂತ್ರಿಕ ಅಧಿಕಾರಿ ಡಾ. ವಿಶ್ವನಾಥ್ ಅವರು ಇಲಾಖೆಯಲ್ಲಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು, ಪಶು ಸಂಗೋಪನೆ ಮಾಡಿ ಆದಾಯವನ್ನು ದ್ವಿಗುಣ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಹೆಸರಘಟ್ಟ ಪಶುಸಂಗೋಪನಾ ಅಧಿಕಾರಿ ಡಾ. ಬಾಲರಾಜ್ ಮತ್ತು ಇತರರು ತರಬೇತಿಯಲ್ಲಿ ಭಾಗವಹಿಸಿದ್ದರು.