ಹರಿಹರ, ಮಾ.19- ಊರಮ್ಮ ದೇವಿಯ ಜಾತ್ರಾ ಮಹೋತ್ಸವವು ಭಕ್ತ ಸಾಗರದ ನಡುವೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.
ಬೆಳಿಗ್ಗೆ, ಕಸಬಾ ಮತ್ತು ಮಾಜೇನಹಳ್ಳಿ ಭಾಗಗಳಲ್ಲಿ ಸಾಂಪ್ರದಾಯಿಕ ‘ಚರಗ ಚೆಲ್ಲುವ’ ವಿಧಿ ನೆರವೇರಿತು. ಯುವಕರು ‘ಉಧೋ, ಉಧೋ ಉಲಿಗ್ಗೋ ಉಲಿಗ್ಗೋ’ ಘೋಷಣೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೋಳದ ರಾಶಿಯನ್ನು ಹಂಚಿದರು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಡೊಳ್ಳು, ತಮಟೆಗಳೊಂದಿಗೆ ಉತ್ಸಾಹದಿಂದ ಪಾಲ್ಗೊಂಡರು.
ಮಧ್ಯಾಹ್ನ, ಊರಮ್ಮ ದೇವಿಗೆ ಮಾಂಗಲ್ಯ ಧಾರಣೆ, ಬೇವಿನ ಉಡಿಗೆ ಮತ್ತು ದೀಡು ನಮಸ್ಕಾರಗಳನ್ನು ಸಲ್ಲಿಸಲಾಯಿತು. ಭಕ್ತರು ಕುರಿ ಮತ್ತು ಕೋಳಿಗಳನ್ನು ಬಲಿ ನೀಡಿ, ದೇವಿಗೆ ನೈವೇದ್ಯ ಅರ್ಪಿಸಿದರು. ಬಳೆ, ಅಕ್ಕಿ, ಸೀರೆ, ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳನ್ನು ದೇವಿಗೆ ಸಮರ್ಪಿಸಿ ಭಕ್ತಿ ಮೆರೆದರು.
ಜಾತ್ರೆಯ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಭಕ್ತರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಕುರಿ, ಕೋಳಿ, ಮೊಟ್ಟೆ ಸೇರಿದಂತೆ ವಿವಿಧ ಮಾಂಸಾಹಾರ ಪದಾರ್ಥಗಳನ್ನು ಬಡಿಸಲಾಯಿತು. ಅಂದಾಜು 10 ಸಾವಿರಕ್ಕೂ ಹೆಚ್ಚು ಕುರಿ, ಕೋಳಿಗಳನ್ನು ಬಲಿ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ.
ಭಕ್ತರ ದಟ್ಟಣೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸ್ ಇಲಾಖೆಯು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶ್ರಮಿಸಿತು. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅಲ್ಲದೆ, ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಚೌಕಿ ಮನೆಯ ಬಳಿ ಭಕ್ತರು ಬೇವಿನ ಸೊಪ್ಪು ಮತ್ತು ಹಳೆಯ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದಿದ್ದರಿಂದ ಕಸದ ರಾಶಿ ನಿರ್ಮಾಣವಾಗಿತ್ತು. ನಗರಸಭೆಯ ಪೌರ ಕಾರ್ಮಿಕರು ಜೆಸಿಬಿ ಯಂತ್ರದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಸಂಜೆ, ಚೌಕಿ ಮನೆಯಲ್ಲಿ ರಾಣಿಗರ ಬಳಗದವರಿಂದ ದೇವಿ ಹಾಡುಗಳು ಮತ್ತು ಭಜನೆ ಕಾರ್ಯಕ್ರಮಗಳು ನಡೆದವು. ಅರ್ಚಕರಾದ ಈರಣ್ಣ, ಗಜೇಂದ್ರ, ಪುನೀತ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.