ದಾವಣಗೆರೆ, ಫೆ.16- ಯಾವುದೇ ವಿಶ್ವವಿದ್ಯಾಲಯವಾಗಲೀ ಜನಪ್ರಿಯತೆಗಿಂತ ಅಲ್ಲಿನ ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ ಎಂದು ಜಿಎಂ ವಿವಿ ಉಪ ಕುಲಪತಿ ಡಾ.ಹೆಚ್.ಡಿ. ಮಹೇಶಪ್ಪ ತಿಳಿಸಿದರು.
ನಗರದ ಜಿ.ಎಂ ವಿಶ್ವವಿದ್ಯಾಲಯದಲ್ಲಿ ಫೆ.13ರಂದು ಕಾಲೇಜಿನ ಕೇಂದ್ರ ಗ್ರಂಥಾಲ ಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಶಿಕ್ಷಣ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ ದರು. ವಿಶ್ವವಿದ್ಯಾಲಯದ ಕ್ರಮಾಂಕವೇ ಮುಖ್ಯ ಅಂಶವಲ್ಲ. ಕ್ರಮಾಂಕಗಳು ಇರುತ್ತವೆ. ಆದರೆ ಎಲ್ಲದಕ್ಕೂ ಮಿಗಿಲಾಗಿ, ಗುಣಮಟ್ಟವೇ ಬಹು ಮುಖ್ಯ ಎಂದು ಹೇಳಿದರು.
ಉನ್ನತ ಅಧ್ಯಯನ ಮುಂದುವರೆಸಲು ಅತ್ಯುತ್ತಮ ಮಾರ್ಗವೆಂದರೆ ಕ್ಯಾಂಪಸ್ ಅನುಭವಿಸುವ ಆರಾಮತೆ ಹಾಗೂ ಸುರಕ್ಷತೆ. ಇದು ಶೈಕ್ಷಣಿಕ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ವಿವರಿಸಿದರು.
ಅನೇಕ ವಿದ್ಯಾರ್ಥಿಗಳಿಗೆ ವಿದೇಶ ಉನ್ನತ ಶಿಕ್ಷಣದ ಬಗ್ಗೆ ತಿಳಿಯುವ ಕುತೂಹಲ ಮತ್ತು ಸೇರ ಬಯಸುವ ಆಸಕ್ತಿ ಇದ್ದು, ಅಂತಹ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಮೇಳವು ಸಹಕಾರಿಯಾಗಲಿದೆ ಎಂದು ಹೇಳಿದರು.
ಕುಲಸಚಿವ ಡಾ.ಬಿ.ಎಸ್. ಸುನೀಲ್ ಕುಮಾರ್ ಮಾತನಾಡಿ, ಮೇಳದಲ್ಲಿ ಸಿಗುವ ಮಾಹಿತಿ ಬಹಳಷ್ಟು ಆತ್ಮವಿಶ್ವಾಸ ನೀಡುತ್ತದೆ. ನಿರ್ಧಾರದ ಕುರಿತು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಇದೊಂದು ಅದ್ಭುತ ಅವಕಾಶ ಎಂದರು.
ಜಿ.ಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ ಮಾತನಾಡಿ, ಜ್ಞಾನ ಪಡೆಯಲು ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತಿದೆ. ಅಂತೆಯೇ ಜ್ಞಾನ ಪಡೆಯಲು ಎಷ್ಟು ಶಿಕ್ಷಣ ಪಡೆದರೂ ಸಾಲದು. ಅದು ನಿರಂತರವಾಗಿರಬೇಕು ಎಂದರು.
ಈ ವೇಳೆ ಬೆಂಗಳೂರಿನ ಎಜು ಟ್ರಸ್ಟ್ ಸಂಸ್ಥೆಯ ಸಿಇಓ ಅರುಣ್ ಪ್ರಸಾದ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ಅರುಣ್, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಇದ್ದರು.