ದಾವಣಗೆರೆ ಅರ್ಬನ್‌ ಬ್ಯಾಂಕ್‌ ನಿಟುವಳ್ಳಿ ಶಾಖೆ ಸಾರ್ವಜನಿಕರ ಸೇವೆಗೆ

ದಾವಣಗೆರೆ ಅರ್ಬನ್‌ ಬ್ಯಾಂಕ್‌ ನಿಟುವಳ್ಳಿ ಶಾಖೆ ಸಾರ್ವಜನಿಕರ ಸೇವೆಗೆ

ದಾವಣಗೆರೆ, ಫೆ. 16 – ತನ್ನ ಪ್ರಧಾನ ಕಛೇರಿಯೂ ಸೇರಿದಂತೆ 7 ಶಾಖೆಗಳನ್ನು ಹೊಂದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರ ಬಹುದಿನಗಳ ಬೇಡಿಕೆಯಾಗಿದ್ದ ನಿಟುವಳ್ಳಿ ಶಾಖೆಯನ್ನು ಇದೀಗ ಸಾರ್ವಜನಿಕರ ಸೇವೆಗೆ ಸಮರ್ಪಿಸಿದೆ.

ನಿಟುವಳ್ಳಿಯ ಹೆಚ್‌ಕೆಆರ್ ಸರ್ಕಲ್ ಹತ್ತಿರದ ಸಿದ್ಧರಾಮೇಶ್ವರ ಬಡಾವಣೆಯ 1ನೇ ಮುಖ್ಯರಸ್ತೆ 1ನೇ ತಿರುವಿನಲ್ಲಿ ಈ ಶಾಖೆಯನ್ನು ಸ್ಥಾಪಿಸಲಾಗಿದ್ದು, ಮೊನ್ನೆ ನಡೆದ ಸರಳ ಸಮಾರಂಭದಲ್ಲಿ ನಾಗರಿಕರ ಶುಭ ಹಾರೈಕೆಗಳೊಂದಿಗೆ ನೂತನ ಶಾಖೆಯನ್ನು ಆರಂಭಿಸಲಾಯಿತು.

ಶಾಖೆ ಉದ್ಘಾಟನೆ

ಮಾಜಿ ಸಚಿವರೂ ಆದ ಹಿರಿಯ ಮುತ್ಸದ್ಧಿ ಎಸ್.ಎ. ರವೀಂದ್ರನಾಥ್ ಅವರು, ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರು, ಸದಸ್ಯರು, ಗ್ರಾಹಕರು, ಠೇವಣಿದಾರರು, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಚಪ್ಪಾಳೆಗಳ ಮಧ್ಯೆ ಟೇಪು ಕತ್ತರಿಸುವುದರ ಮೂಲಕ ನೂತನ ಶಾಖೆಯನ್ನು ನಾಗರಿಕರ ಸೇವೆಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ಎಸ್.ಎ. ರವೀಂದ್ರನಾಥ್, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ತಮ್ಮ ನಡುವಿನ ಬ್ಯಾಂಕ್ ವ್ಯವಹಾರ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿ ಈ ಬ್ಯಾಂಕಿನ ಸೇವೆ ಇನ್ನೂ ಸಾವಿರಾರು ಜನಕ್ಕೆ ಸಿಗುವಂತಾಗಲಿ ಎಂದು ಹಾರೈಸಿದರು.

ಭದ್ರತಾ ಕೊಠಡಿ ಉದ್ಘಾಟನೆ

ಭದ್ರತಾ ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿದ ನಿಟುವಳ್ಳಿ ಭಾಗದ ಹಿರಿಯ ಮುಖಂಡ ಆರ್.ಎಸ್. ಶೇಖರಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯ ಪ್ರಥಮ ಸಹಕಾರಿ ಬ್ಯಾಂಕ್ ಮತ್ತು ಪ್ರತಿಷ್ಠಿತ ಸಹಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಶಾಖೆಯನ್ನು ನಿಟುವಳ್ಳಿಯಲ್ಲಿ ಆರಂಭಿಸಿರುವುದು ತಮಗೆ ಸಂತಸವನ್ನುಂಟುಮಾಡಿದೆ ಎಂದರಲ್ಲದೇ, ಈ ಭಾಗದಲ್ಲಿ ಅಭಿವೃದ್ಧಿಪಡಿಸುವಲ್ಲಿ ತಮ್ಮ ಪಾತ್ರ ನಿರ್ವಹಿಸುವುದಾಗಿ ಭರವಸೆ ನೀಡಿದರು.

ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದ ಸಹಕಾರ ಸಂಘಗಳ ಉಪ ನಿಬಂಧಕ ಟಿ. ಮಧು ಶ್ರೀನಿವಾಸ್ ಮಾತನಾಡಿ, ಸಹಕಾರ ಬ್ಯಾಂಕುಗಳ ಮೂಲಕ ಸರ್ಕಾರ ನೀಡುತ್ತಿರುವ ಯಶಸ್ವಿನಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಷೇರುದಾರರಿಗೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್. ನಾಗಭೂಷಣ್ ಮತ್ತು ಮಹಾನಗರ ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್ ಮಾತನಾಡಿ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನೂತನ  ನಿಟುವಳ್ಳಿ ಶಾಖೆಯು ಈ ಬ್ಯಾಂಕಿನ ಇತರೆ ಶಾಖೆಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷರೂ, ಹಾಲಿ ಹಿರಿಯ ನಿರ್ದೇಶಕರೂ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರೂ ಆದ ಕೋಗುಂಡಿ ಬಕ್ಕೇಶಪ್ಪ, ನಿಟುವಳ್ಳಿ ಶಾಖೆ ಆರಂಭಿಸಿರುವ ಅಗತ್ಯತೆಯನ್ನು ತಿಳಿಸಿದರಲ್ಲದೇ, ತಾವು ಈ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಿಟುವಳ್ಳಿ ಶಾಖೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು ತಮಗೆ ಹರ್ಷವನ್ನುಂಟುಮಾಡಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜವಳಿ ಉದ್ಯಮಿಯೂ ಆಗಿರುವ ಬ್ಯಾಂಕಿನ ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ದಾವಣಗೆರೆ ಅರ್ಬನ್ ಬ್ಯಾಂಕ್ ಆರಂಭದಿಂದ ಈವರೆಗಿನ ಪ್ರಗತಿಯನ್ನು ಸಭಿಕರೊಂದಿಗೆ ಹಂಚಿಕೊಂಡರಲ್ಲದೇ, ಷೇರುದಾರರ ಮತ್ತು ಗ್ರಾಹಕರ ಅಭಿಮಾನದಿಂದಾಗಿ ಈ ಬ್ಯಾಂಕ್ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಹಿರಿಯ ವರ್ತಕರೂ ಆಗಿರುವ ಬ್ಯಾಂಕಿನ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಅವರು ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ, ಬ್ಯಾಂಕಿನ ಸದಸ್ಯರು, ಗ್ರಾಹಕರು, 

ಠೇವಣಿದಾರರ ಪ್ರೋತ್ಸಾಹ, ಸಿಬ್ಬಂದಿ ವರ್ಗದವರ ಶ್ರಮ ಮತ್ತು ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಬ್ಯಾಂಕ್ ಪ್ರಗತಿ ಹೊಂದಲು ಕಾರಣ ಎಂದು ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿ ಧನ್ಯವಾದ ಹೇಳಿದರು.

ಬ್ಯಾಂಕಿನ ನಿರ್ದೇಶಕರುಗಳಾದ ಅಂದನೂರು ಮುಪ್ಪಣ್ಣ, ಪಲ್ಲಾಗಟ್ಟಿ ಶಿವಾನಂದಪ್ಪ, ಎಂ. ಚಂದ್ರಶೇಖರ್, ದೇವರಮನೆ ಶಿವಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೇರಿ ಮಹೇಶ್, ವಿ. ವಿಕ್ರಮ್, ಶ್ರೀಮತಿ ಎ.ಆರ್. ಅರ್ಚನಾ ಡಾ. ರುದ್ರಮುನಿ, ಹೆಚ್.ಎಂ. ರುದ್ರಮುನಿಸ್ವಾಮಿ, ಸೋಗಿ ಮುರುಗೇಶ್, ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ ಅವರುಗಳು ಅತಿಥಿ ಗಣ್ಯರನ್ನು ಬರಮಾಡಿಕೊಂಡು ಸನ್ಮಾನಿಸಿ, ಗೌರವಿಸಿದರು.

ಹಿರಿಯ ನ್ಯಾಯವಾದಿಯೂ ಆಗಿರುವ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಣವಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಬ್ಯಾಂಕಿನ ಪ್ರಗತಿಯ ಪಕ್ಷಿನೋಟವನ್ನು ಸಭಿಕರ ಮುಂದಿಟ್ಟರು. 

ಇದೇ ಸಂದರ್ಭದಲ್ಲಿ ಬ್ಯಾಂಕಿನ ನಿಟುವಳ್ಳಿ ಶಾಖೆಗೆ ನಿವೇಶನ ನೀಡಿದ ಹಿರಿಯ ವರ್ತಕ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ನೂತನ ಕಟ್ಟಡದ ಅಭಿಯಂತರ ಟಿ.ಸಿ. ವಿನಾಯಕ, ವಾಸ್ತುಶಿಲ್ಪಿ ಐ.ಆರ್. ಸುಮ ಸೇರಿದಂತೆ ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಬ್ಯಾಂಕಿನ ಸದಸ್ಯರು, ಠೇವಣಿದಾರರು, ಗಣ್ಯರು ಮಾತನಾಡಿ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಸೇವೆ ಮತ್ತು ಪ್ರಗತಿಯನ್ನು ಕೊಂಡಾಡಿದರು. ಶ್ರೀಮತಿ ಎಂ. ಅನುಶ್ರೀ  ಮತ್ತು ಶ್ರೀಮತಿ ಎ.ಎಂ. ತೇಜಸ್ವಿನಿ ಅವರುಗಳು ಪ್ರಾರ್ಥನೆ ಸಲ್ಲಿಸಿದರು. ಹಿರಿಯ ನಿರ್ದೇಶಕ ಅಜ್ಜಂಪುರ ಶೆಟ್ರು ವಿಜಯಕುಮಾರ್ ವಂದಿಸಿದರು. ನಿರ್ದೇಶಕ ಇ.ಎಂ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬ್ಯಾಂಕಿನ ವ್ಯವಸ್ಥಾಪಕರುಗಳಾದ ಪ್ರಧಾನ ಕಛೇರಿಯ ಹೆಚ್.ವಿ. ರುದ್ರೇಶ್, ಚೌಕಿಪೇಟೆಯ ಜಿ.ಕೆ. ವಿಜಯಕುಮಾರ್, ನರಸರಾಜ ರಸ್ತೆಯ ರವಿಶಂಕರ್‌, ಪಿ.ಜೆ. ಬಡಾವಣೆಯ ಸಾನಂದ ಗಣೇಶ್, ದೇವರಾಜ ಅರಸು ಬಡಾವಣೆಯ ಕೆ.ಎಸ್. ಮಹೇಶ್, ಹೊನ್ನಾಳಿಯ ಹೆಚ್. ಕುಮಾರ್, ನಿಟುವಳ್ಳಿಯ ಎನ್.ಕೆ. ಯೋಗೇಶ್‌, ಆಡಳಿತ ಕಛೇರಿ ಡಿಬಿಎ ಬಿ.ಎಸ್. ಪ್ರಶಾಂತ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!