ಸೈಬರ್ ವಂಚನೆಯಾದರೆ ಶೀಘ್ರ ದೂರು ನೀಡಿ – ಯಶವಂತ್ ಎ.ಎಸ್

ಸೈಬರ್ ವಂಚನೆಯಾದರೆ ಶೀಘ್ರ ದೂರು ನೀಡಿ – ಯಶವಂತ್ ಎ.ಎಸ್

ಈಡಿಯಟ್ ಸಿಂಡ್ರೋಮ್

ಮೊಬೈಲ್ ಬಿಟ್ಟಿರಲಾಗದ ಸ್ಥಿತಿಯನ್ನು ಮಾನಸಿಕ ತಜ್ಞರು ನೋಮೋಫೋಬಿಯಾ ಎಂದು ಕರೆಯುತ್ತಾರೆ. ಅದರ ಮುಂದುವರಿದ ಭಾಗವನ್ನು IDIOT ಸಿಂಡ್ರೋಮ್ ಎನ್ನಲಾಗುತ್ತದೆ. ಇದಕ್ಕೆ ತುತ್ತಾದವರು ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ನಲ್ಲಿ ಹುಡುಕಲಾರಂಭಿಸುತ್ತಾರೆ. ಇವರೇ ಹೆಚ್ಚು ಮೋಸ ಹೋಗುವ ಸಾಧ್ಯತೆ ಇದೆ ಎಂದು ಯಶವಂತ್ ಎ.ಎಸ್. ಹೇಳಿದರು.

ದಾವಣಗೆರೆ, ಫೆ.16- ಪೆಟ್ರೋಲ್, ಡೀಸೆಲ್‌ ರೀತಿಯೇ ಸಾರ್ವಜನಿಕರ ವೈಯಕ್ತಿಕ ಡೆಟಾ ಮಾರಾಟವಾಗುತ್ತಿವೆ. ಇದರಿಂದ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು,  ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸೈಬರ್ ಭದ್ರತೆ ಮತ್ತು ನಿರ್ವಹಣಾ ಸಲಹೆಗಾರ ಯಶವಂತ್ ಎ.ಎಸ್. ಹೇಳಿದರು.

ವರ್ತಮಾನ ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸೈಬರ್ ವಂಚನೆ-ಒಳ ಸುಳಿವು ವಿಷಯ ಕುರಿತು ಅವರು ಮಾತನಾಡಿದರು.

ಸೈಬರ್ ವಂಚನೆಗೆ ತುತ್ತಾದರೆ ಕೂಡಲೇ 1930ಕ್ಕೆ ಕರೆ ಮಾಡಬೇಕು. ಅವರು ಕೇಳುವ ಮಾಹಿತಿ ನೀಡಬೇಕು. ವಂಚನೆಗೆ ತುತ್ತಾದ ನಂತರದ ಒಂದು ಗಂಟೆಯನ್ನು `ಗೋಲ್ಡನ್ ಅವರ್’ ಎನ್ನಲಾಗುತ್ತದೆ. ಈ ಸಮಯ ನಿಮ್ಮ ವಂಚನೆ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಟೆಲಿಗ್ರಾಂ ಆಪ್‌ ಮೂಲಕ ಹೆಚ್ಚು ಮೋಸ ನಡೆಯುತ್ತಿದೆ. ವಿದ್ಯಾರ್ಥಿಗಳು ನೋಟ್ಸ್‌ ನೋಡು ವುದು, ಪೈರಸಿ ಸಿನಿಮಾಗಳನ್ನು ನೋಡುವುದು ಇದರಲ್ಲಿಯೇ ಹೆಚ್ಚು. ಕೂಡಲೇ ಟೆಲಿಗ್ರಾಂ ಆಪ್ ಬಳಕೆ ಕೈ ಬಿಡುವುದು ಉತ್ತಮ ಎಂದು ಹೇಳಿದರು.

ಜಗತ್ತಿನಲ್ಲಿ ಮೋಸ ಹೋಗುತ್ತಿರುವ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ದೇಶದ ಭರತ್ ಪುರ ಎಂಬಲ್ಲಿಯೇ ಶೇ.18ರಷ್ಟು ಸೈಬರ್‌ ಕ್ರೈಂಗಳು ನಡೆಯುತ್ತಿವೆ. ಇವುಗಳ ಮೂಲ ಹುಡುಕು ವುದು ಪೊಲೀಸರಿಗೆ ಕಷ್ಟವಾಗುತ್ತಿದೆ ಎಂದರು.

ಇ-ಮೇಲ್ ಪಾಸ್‌ವರ್ಡ್‌ 8 ಅಕ್ಷರಗಳಿಂತ ಕಡಿಮೆ ಇದ್ದರೆ ಕೇವಲ 15 ನಿಮಿಷಗಳಲ್ಲಿ ಅದನ್ನು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಟ 14 ಅಕ್ಷರದ ಕಠಿಣ ಪಾಸ್‌ವರ್ಡ್‌ ಇಟ್ಟುಕೊಳ್ಳಬೇಕು. ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸುತ್ತಿರಬೇಕು ಎಂದು ಹೇಳಿದರು.

ನಿಮ್ಮ ಹೆಸರಿನಲ್ಲಿ ಮಾದಕ ವಸ್ತುಗಳ ಪಾರ್ಸಲ್  ಬಂದಿದೆ ಎಂದೂ, ಅಥವಾ ನಿಮ್ಮ ಕುಟುಂಬ ಸದಸ್ಯರನ್ನು ಬಂಧಿಸಲಾಗಿದೆ ಎಂಬ ಕಾರಣದಿಂದ ನಿಮ್ಮನ್ನು ಡಿಜಿಟಲ್ ಅರೆಸ್ಟ್‌ ಮಾಡುವುದಾಗಿ ವಂಚತರು ಹೇಳುತ್ತಾರೆ.  ಈ ವೇಳೆ ಗಾಬರಿಯಾಗಿ ಸ್ಪಂದಿಸಬಾರದು. ಯಾವ ಠಾಣೆಯಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಕೇಳಿ, ಪೊಲೀಸ್ ಠಾಣೆಗೆ ತಾವೇ ಬರುವುದಾಗಿ ಹೇಳಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್‌ ಮಾಡುವಾಗಲೂ ವಂಚನೆಗೆ ಒಳಗಾಗಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಚಾರ್ಜ್‌ ಮಾಡುವುದು ಕೈ ಬಿಡಿ. ಪವರ್ ಬ್ಯಾಂಕ್ ಬಳಸಿ, ಅವುಗಳನ್ನೇ ಚಾರ್ಜ್‌ ಮಾಡಿ. ಚಾರ್ಜಿಂಗ್ ಅನಿವಾರ್ಯವಾದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ಚಾರ್ಜ್‌ ಮಾಡುವಂತೆ ಕಿವಿ ಮಾತು ಹೇಳಿದರು.

ಕ್ರೆಡಿಟ್ ಅಥವಾ ಡೆಬಿಟ್‌ ಕಾರ್ಡ್‌ನಲ್ಲಿ ವೈಫೈ ಮೋಡ್ ಆಫ್‌ ಮಾಡುವುದು ಅಗತ್ಯ ಇಲ್ಲದಿದ್ದರೆ 10 ಅಡಿ ದೂರದಿಂದಲೇ ನಿಮ್ಮ ಖಾತೆಯಲ್ಲಿನ ಹಣ ತೆಗೆಯುವ ಸಾಧ್ಯತೆ ಇರುತ್ತದೆ. ಬ್ಯಾಂಕ್‌ನ ಅಧಿಕೃತ ಆಪ್ ಮೂಲಕ ವೈಫೈ ಮೋಡ್ ಆಫ್ ಮಾಡುವಂತೆ ಹೇಳಿದರು.

ಏರ್‌ಪೋರ್ಟ್‌ಗಳಲ್ಲಿ ಲಗೇಜ್ ಬ್ಯಾಗ್‌ಗಳಿಗೆ ಹಾಕುವ ಟ್ಯಾಗ್‌ನಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ಇರುತ್ತದೆ. ಆದ್ದರಿಂದ ಏರ್‌ಪೋರ್ಟ್‌ನಿಂದ ಹೊರ ಬಂದ ಕೂಡಲೇ ಅದನ್ನು ತೆಗೆದು ಬ್ಯಾಗ್‌ ಒಳಗೆ ಹಾಕಿಕೊಳ್ಳಿ ಎಂದು ಹೇಳಿದರು.

ಮೊಬೈಲ್‌ಗಳಲ್ಲಿ ಬರುವ .APK, .EVE ಫೈಲ್‌ಗಳನ್ನು  ತೆರೆಯಬಾರದು. ಯಾರೇ ಮೊಬೈಲ್ ಗಿಫ್ಟ್‌ ಕೊಟ್ಟರೂ ಎಚ್ಚರಿಕೆಯಿಂದ ಇರಬೇಕು ಎಂದರು.

ವರ್ತಮಾನ ಸದಸ್ಯ ಹೆಚ್.ಎಲ್. ಶ್ರೀನಿವಾಸ ಮೂರ್ತಿ, ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿ  ಸುನಿಲ್ ತೇಲಿ ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀಧರ್ ಹೆಚ್.ಎಂ. ಪ್ರಾರ್ಥಿಸಿದರು. ಕೆ.ಎಂ. ಮೇಘರಾಜ್ ಸ್ವಾಗತಿಸಿದರು. ಪ್ರಸಾದ್ ಬಂಗೇರ ಎಸ್. ನಿರೂಪಿಸಿದರು. ಗಂಗಾಧರ್ ವಂದಿಸಿದರು.

error: Content is protected !!