ಸಾಹಿತ್ಯದ ಮೇಲೆ ಮಹಿಳೆಯರ ಒಲವು ಹೆಚ್ಚಲಿ – ಶಿವಾನಂದ ತಗಡೂರು

ಸಾಹಿತ್ಯದ ಮೇಲೆ ಮಹಿಳೆಯರ ಒಲವು ಹೆಚ್ಚಲಿ – ಶಿವಾನಂದ ತಗಡೂರು

ದಾವಣಗೆರೆ, ಫೆ. 16- ಮಹಿಳೆಯರು ಬದುಕಿನ ಜೊತೆಗೆ ಸಾಹಿತ್ಯದ ಬಗ್ಗೆಯೂ ಒಲವು ತೋರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.

ಎ.ವಿ. ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ  ಹಮ್ಮಿಕೊಳ್ಳಲಾಗಿದ್ದ ಶ್ರೀಮತಿ ಅನುಪಮ ವಿರೂಪಾಕ್ಷಪ್ಪ ಇವರ ದ್ವಿತೀಯ ಕವನ ಸಂಕಲನ `ಭಾವಗಳ ಬಿಂಬ’ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯದ ಬದುಕಿನಾಚೆಗೆ ಗೃಹಿಣಿಯರು ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು. ಆ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸುವುದು ಅಸಾಧ್ಯವಲ್ಲ. ಆ ಕೆಲಸವನ್ನು ಅನುಪಮಾ ಅವರು ಮಾಡಿದ್ದಾರೆ ಎಂದರು.

ಸಾಹಿತ್ಯ ನಿಂತ ನೀರಲ್ಲ. ಅದು ಬದುಕಿಗೆ ಪ್ರೇರಣೆ ನೀಡುತ್ತದೆ. ಬರವಣಿಗೆ ಪ್ರಕ್ರಿಯೆಯನ್ನು ಕೈ ಬಿಡಬಾರದು. ಭಾವಗಳ ಬಿಂಬ ಕವನ ಸಂಕಲನದ ಮೂಲಕ ಅನುಪಮ ಅವರು ಅನೇಕ ಘಟನೆಗಳಿಗೆ ತಮ್ಮದೇ ಇತಿ-ಮಿತಿಯಲ್ಲಿ ಕನ್ನಡಿ ಹಿಡಿದಿದ್ದಾರೆ ಎಂದರು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಾಟ್ಸಾಪ್‌ ಪರಿಣಿತರೇ ಆಗಿದ್ದಾರೆ. ಅಂತವರ ನಡುವೆ ಪುಸ್ತಕದ ಕಡೆ ತಿರುಗಿ ನೋಡುವ ಚಿಕ್ಕ ಪ್ರಯತ್ನವನ್ನು ವೈದ್ಯ ದಂಪತಿ ಮಾಡಿರುವುದು ಅಭಿನಂದನಾರ್ಹ ಎಂದರು.

ಜೀವನ ತುಂಬಾ ಚಿಕ್ಕದು. ಇರುವಷ್ಟು ದಿನ ನೆರೆ ಹೊರೆಯವರ ಕಷ್ಟಗಳಿಗೆ ಸ್ಪಂದಿಸುತ್ತಾ, ಧನ್ಯತಾ ಭಾವದಿಂದ ಬದುಕಬೇಕು ಎಂದು ಹೇಳಿದರು.

ಪ್ರೀತಿ, ಮಾನವೀಯತೆ, ಅಕ್ಕರೆಯಿಂದ ಚಿಕಿತ್ಸೆ ಕೊಡವ ವೈದ್ಯರಿಗಿಂತ ಹಣದ ಬೆನ್ನತ್ತಿ ಹೋಗುವ ವೈದ್ಯರೇ ಹೆಚ್ಚಾಗಿರುವ ಈ ದಿನಗಳಲ್ಲಿ ಹಣ ಇರಲಿ, ಬಿಡಲಿ ಮಾನವೀಯತೆಯ ತುಡಿತದಿಂದ ಸ್ಪಂದಿಸುವ ವಿರಳ ವೈದ್ಯರಲ್ಲಿ ವಿರೂಪಾಕ್ಷಪ್ಪ ಒಬ್ಬರು. ಅವರ ಪತ್ನಿ ಕವಿ ಹೃದಯದ ಹೆಣ್ಣು ಎಂದು ಬಣ್ಣಿಸಿದರು.

ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಕವನ ಸಂಕಲನದ ಕುರಿತು ಮಾತನಾಡುತ್ತಾ, ಸಾಹಿತ್ಯದ ಆಸಕ್ತಿ, ಶ್ರದ್ಧೆ, ಅಭಿರುಚಿ ಕವನ ಸಂಕಲನದಲ್ಲಿ ಮೇಲ್ಮಟ್ಟದಲ್ಲಿದೆ ಎಂದರು. ಮಾತುಗಳು ಎಷ್ಟು ಮುಖ್ಯ? ಹೇಗೆ ಮಾತನಾಡಬೇಕು ಎನ್ನುವ ಮಾತಿನ ಮಹತ್ವ ಕವನಗಳಲ್ಲಿ ಕಂಡು ಬರುತ್ತದೆ ಎಂದರು.

ಜಾಗತೀಕರಣ, ಆಧುನೀಕರಣದ ಯುಗದಲ್ಲಿ ಮಕ್ಕಳು ಕಳೆದು ಹೋಗಿದ್ದಾರೆ. ಮಕ್ಕಳು ಮೊಬೈಲ್ ಗೀಳು ಹೆಚ್ಚಾಗಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಸಮಾರಂಭಗಳಿಗೆ ಮಕ್ಕಳನ್ನು ಕರೆ ತರುವಂತಾಗಬೇಕು. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ, ಕೀಳರಿಮೆ ಹೊಡೆದೋಡಿಸಿ ಬದುಕಬೇಕೆಂಬುದನ್ನು ಕವನಗಳ ಮೂಲಕ ತಿಳಿಸಿದ್ದಾರೆ ಎಂದರು.

ಲೇಖಕಿ ಅನುಪಮ ವಿರುಪಾಕ್ಷಪ್ಪ ಮಾತ ನಾಡುತ್ತಾ, ಮನುಷ್ಯ ಮೌಲ್ಯದ ಅಡಿಪಾಯದಲ್ಲಿ ಬದುಕುತ್ತಾ ಹಣ, ಆಸ್ತಿ ಕೀರ್ತಿ ಗಳಿಸಿದಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ. ಮೌಲ್ಯಗಳಿಲ್ಲದ ಜೀವನಕ್ಕೆ ಅರ್ಥವಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್, ಪತ್ರಕರ್ತ ಜಿಗಳಿ ಪ್ರಕಾಶ್ ಉಪಸ್ಥಿತರಿದ್ದರು.

ದಾವಣಗೆರೆ ವಿವಿ  ಪ್ರಾಧ್ಯಾಪಕ ಡಾ. ಅಶೋಕ್ ಕುಮಾರ್  ಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಸಾಪ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ನಿರೂಪಿಸಿದರು. ಡಾ. ಇ. ವಿರುಪಾಕ್ಷಪ್ಪ ಸ್ವಾಗತಿಸಿದರು. ಕು.ಸಂಹಿತ ಪ್ರಾರ್ಥಿಸಿದರು.

error: Content is protected !!