ನದಿಗಳ ಶುದ್ಧತೆಗೆ ಕಠಿಣ ಕಾನೂನು ರೂಪಿಸಲಿ – ಶ್ರೀಶೈಲ ಶ್ರೀಗಳ ಒತ್ತಾಯ

ನದಿಗಳ ಶುದ್ಧತೆಗೆ ಕಠಿಣ ಕಾನೂನು ರೂಪಿಸಲಿ – ಶ್ರೀಶೈಲ  ಶ್ರೀಗಳ ಒತ್ತಾಯ

ಹರಿಹರ, ಫೆ.16- ನದಿಗಳ ಶುದ್ಧತೆ ಹಾಗೂ ಪಾವಿತ್ರ್ಯತೆಗೆ ಕಠಿಣ ಕಾನೂನು ರೂಪಿಸಿ, ಕಟ್ಟು ನಿಟ್ಟಾಗಿ ಪರಿಪಾಲಿಸುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಒತ್ತಾಯಿಸಿದರು.

ಸಮೀಪದ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿಯ ದಡದಲ್ಲಿರುವ ಅವಿಮುಕ್ತ ಪುಣ್ಯಕೋಟಿ ಮಠದ ಬಾಲ ಯೋಗಿ ಜಗದೀಶ್ವರ ಶ್ರೀಗಳು ಹಮ್ಮಿಕೊಂಡಿದ್ದ ತುಂಗಭದ್ರಾರತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಡ್ಯಾಮ್‌ಗಳು ಹಾಗೂ ನದಿಗಳು ಬೇಸಿಗೆ ಸಂದರ್ಭದಲ್ಲಿ ಬತ್ತಿಹೋಗದಂತೆ ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ನದಿಯ ದಡದಲ್ಲಿ ಗಿಡಗಳನ್ನು ನೆಡುವ ಮೂಲಕ ನದಿಯ ನೀರು ಬಿಸಿಲಿನ ಬೇಗೆಗೆ ಆವಿಯಾಗುವುದನ್ನು ತಡೆಯ ಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಖಾನೆಗಳು ಮತ್ತು ನಗರಗಳ ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡದೆ ಆ ನೀರನ್ನು ಶುದ್ಧೀಕರಣ ಗೊಳಿಸಿ ನದಿಗೆ ಬಿಡುವುದರಿಂದ ನದಿಗಳ ಪಾವಿತ್ರ್ಯತೆಯನ್ನು ಕಾಪಾಡಲು ಸಾಧ್ಯ ಇಂತಹ ತಿಳುವಳಿಕೆಗಳನ್ನೇ ನೀಡಲು ಗಂಗಾರತಿ ಮತ್ತು ತುಂಗಭದ್ರಾರತಿ ಮಾಡಲಾಗುತ್ತದೆ ಎಂದರು.

ನದಿಯನ್ನು ಪವಿತ್ರಗೊಳಿಸಿ, ಪೂಜಿಸುವುದೇ `ತುಂಗಭದ್ರಾರತಿಯ’ ಮುಖ್ಯ ಉದ್ದೇಶ ಆಗಿದೆ. ಆದರೆ ಒಂದೆಡೆ ಜಲಮೂಲವನ್ನು ಅಪವಿತ್ರ ಹಾಗೂ ಅಶುದ್ಧಗೊಳಿಸುತ್ತಿರುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತನಾಡಿದ ಬಾಲಯೋಗಿ ಜಗದೀಶ್ವರ ಶ್ರೀಗಳು, ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ. ಅವರ ಕೋರಿಕೆಗೆ ಶ್ರೀಮಠವು ಸಮ್ಮತಿಸುತ್ತಾ ಬಂದಿದೆ. ಭಕ್ತರ ಆಶಯದಂತೆ ತುಂಗಾರಾತಿಯನ್ನು ತುಂಗಭದ್ರಾರತಿಯಾಗಿ ಆಯೋಜಿಸುತ್ತಿರುವುದು ನಮಗೂ ಹರ್ಷವಾಗಿದೆ ಎಂದರು.

ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ನಾನು ಬಿರ್ಲಾ ಕಂಪನಿಯ ನೌಕರನಾಗಿ ಸೇರಿದ್ದ ಸಂದರ್ಭದಲ್ಲಿ ಕಂಪನಿಯ ಆಡಳಿತ ಮಂಡಳಿಯು ರುದ್ರಪ್ಪ ಲಮಾಣಿ ಕಾರ್ಮಿಕರ ಯೂನಿಯನ್ ಮಾಡುತ್ತಾರೆ ಎಂಬ ಉದ್ದೇಶದಿಂದ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಯಿತು ಎಂದರು.

ಆದರೆ 1987ರಲ್ಲಿ ಕೋಡಿಯಾಲ ಹೊಸಪೇಟೆ ಗ್ರಾಮದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದ ಸಂದರ್ಭದಲ್ಲಿ ಈಗ ಮಠ ಇರುವ ಜಾಗವು ನದಿಯ ಮಹಾಪುರದಿಂದ ಜಲಾವೃತಗೊಂಡಿತು. ಈಗ ಇದೆ ಸ್ಥಳದಲ್ಲಿ ಜಗದೀಶ್ವರ ಶ್ರೀಗಳು ಕಠೋರ ತಪಸ್ಸು ಮಾಡುವ ಮೂಲಕ ಸುಂದರವಾದ ಮಠ ನಿರ್ಮಾಣವಾಗಿರುವುದನ್ನು ಶ್ರೀಗಳ ಸಾಧನೆ ಎಂದರು.

ಜಗದೀಶ್ವರ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನೆನೆ ಗುದಿಗೆ ಬಿದ್ದಿದ್ದು, ಶೀಘ್ರದಲ್ಲಿ ರಂಭಾಪುರಿ ಶ್ರೀಗಳು ಮತ್ತು ಶ್ರೀಶೈಲ ಶ್ರೀಗಳ ಸಾನಿಧ್ಯದಲ್ಲಿ ರಾಣೇಬೆನ್ನೂರು ಹಾಲಿ ಮತ್ತು ಮಾಜಿ ಶಾಸಕರು ಸಭೆ ಕರೆದು, ಚರ್ಚಿಸಿ ಆದಷ್ಟು ಬೇಗನೆ ಕಾರ್ಯಕ್ರಮ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಪುಣ್ಯ ಕೋಟಿ ಮಠದ ಶಿಷ್ಯನಾಗಿ ಈ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವೆ. ಗಂಗಾರತಿ ಮಾದರಿಯಲ್ಲಿ ಇಲ್ಲಿನ ತುಂಗಭದ್ರಾ ನದಿಗೆ ತುಂಗಭದ್ರಾರತಿ ಮಾಡುವ ಮೂಲಕ ಜೀವ ಜಲದ ಪೂಜೆಯನ್ನು ಪರಿಚಯಿಸಿದ ಕೀರ್ತಿ ಪುಣ್ಯ ಕೋಟಿ ಮಠದ ಜಗದೀಶ್ವರ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಪರಿಸರ ಮತ್ತು ನದಿಗಳನ್ನು ಸಂರಕ್ಷಣೆ ಮಾಡದೆ ಹೋದರೆ ಮುಂದೊಂದು ದಿನ ಮನಷ್ಯ ಆಪತ್ತಿಗೆ ತುತ್ತಾಗುತ್ತಾನೆ. ಹಾಗಾಗಿ ಜೀವ-ಜಲ ರಕ್ಷಣೆಯನ್ನು ತುಂಗಭದ್ರಾರತಿ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಾಜಮುಖಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸವಣೂರು ದೊಡ್ಡಹುಣಸೇ ಕಲ್ಮಠದ ಚನ್ನಬಸವ ಶ್ರೀಗಳು, ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಶ್ರೀಗಳು, ನಾವಂದ ಶಿವಯೋಗಿ ಶಿವಾನಂದ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು.

ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಂ ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಮುಖಂಡ ಚಂದ್ರಶೇಖರ್ ಪೂಜಾರ್, ಸಿಂಡಿಕೇಟ್ ಮಾಜಿ ಸದಸ್ಯ ಕೆ.ಎನ್ ಪಾಟೀಲ್, ಹೆಚ್. ವಿಶ್ವನಾಥ್, ವಾಣಿ ಬಕ್ಕೇಶ್, ಶಶಿಕುಮಾರ್ ಮೆಹರ್ವಾಡೆ, ಗ್ರಾ.ಪಂ ಮಾಜಿ ಅಧ್ಯಕ್ಷ ಚೇತನ್, ಮಾಜಿ ಸದಸ್ಯ ಕರಿಯಪ್ಪ ಮ್ಯಾಳಗೇರ್, ಹಿರೇಮಠ ಕುಮಾರಸ್ವಾಮಿ. ರವೀಂದ್ರ ಪಾಟೀಲ್ ಸೇರಿದಂತೆ ಇತರರಿದಿದ್ದರು.

error: Content is protected !!