ಎಸ್ಸಿ-ಎಸ್ಟಿ ದೌರ್ಜನ್ಯ ತಡೆಗೆ ತ್ವರಿತ ಕ್ರಮ ಕೈಗೊಳ್ಳಿ-2024ರಲ್ಲಿ 60 ಪ್ರಕರಣ ದಾಖಲು, 124 ಸಂತ್ರಸ್ತರಿಗೆ ಒಟ್ಟು 1.19 ಕೋಟಿ ರೂ.ಗಳ ಪರಿಹಾರ

ಎಸ್ಸಿ-ಎಸ್ಟಿ ದೌರ್ಜನ್ಯ ತಡೆಗೆ ತ್ವರಿತ ಕ್ರಮ ಕೈಗೊಳ್ಳಿ-2024ರಲ್ಲಿ 60 ಪ್ರಕರಣ ದಾಖಲು, 124 ಸಂತ್ರಸ್ತರಿಗೆ ಒಟ್ಟು 1.19 ಕೋಟಿ ರೂ.ಗಳ ಪರಿಹಾರ

ದಾವಣಗೆರೆ, ಡಿ. 26 – ಪರಿಶಿಷ್ಟ ಜಾತಿ ಮತ್ತು ಪರಿಶಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ತ್ವರಿತ ಕ್ರಮದ ಜೊತೆಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎನ್‌. ಗಂಗಾಧರಸ್ವಾಮಿ ತಿಳಿಸಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 4ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2024ರ ಜನವರಿಯಿಂದ ಈ ವರೆಗೆ 60 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯ ಪ್ರಕರಣಗಳು ಸೇರಿವೆ. ಇದರಲ್ಲಿ 28ಕ್ಕೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಎಫ್‍ಐಆರ್ ಹಂತದಲ್ಲಿ 39.70 ಲಕ್ಷ ರೂ, ಚಾರ್ಜ್‍ಶೀಟ್ ಹಂತದಲ್ಲಿ 79.88 ಲಕ್ಷ ರೂ.ಗಳು ಸೇರಿದಂತೆ ಒಟ್ಟು 1.19 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.

ಪರಿಶಿಷ್ಟ ಜಾತಿಯ 68 ಹಾಗೂ ಪರಿಶಿಷ್ಟ ಪಂಗಡದ 56 ಸಂತ್ರಸ್ತರು ಸೇರಿದಂತೆ 124 ಜನರಿಗೆ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಊರು ಮತ್ತು ಹಾಸ್ಟೆಲ್‍ನಿಂದ ಶಾಲಾ-ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‍ಗಳ ಸಮಸ್ಯೆ ಆಗುತ್ತಿದೆ ಎಂದು ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ, ಮುಂದಿನ 2-3 ತಿಂಗಳಲ್ಲಿ ನಿಗಮಕ್ಕೆ ಹೊಸ ಬಸ್‍ಗಳು ಬರುವ ನಿರೀಕ್ಷೆಯಿದ್ದು, ಆಗ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ ಆಗಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿಯೇ ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಯ ಸವಲತ್ತುಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಿ, ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಸಮಿತಿಯ ಸದಸ್ಯರು ಪ್ರಾಮಾಣಿಕವಾಗಿ ಮಾಡಲು ಮುಂದಾಗಬೇಕು. ದೌರ್ಜನ್ಯಕ್ಕೆ ತುತ್ತಾದವರನ್ನು ಗುರುತಿಸಿ, ಅವರಿಗೆ ಪರಿಹಾರ ಹಾಗೂ ಸೌಲಭ್ಯ ತಲುಪಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್‍ಕುಮಾರ್ ಎಂ. ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ನಾಮ ನಿರ್ದೇಶಿತ ಸದಸ್ಯರಾದ ಅಣಜಿ ಅಂಜಿನಪ್ಪ, ಕುಂದುವಾಡ ಮಂಜುನಾಥ ಇನ್ನಿತರರು ಇದ್ದರು.

error: Content is protected !!