ದಾವಣಗೆರೆ, ಡಿ. 25- ಆನಂದದ ಜೀವನಕ್ಕಾಗಿ ಮನದಲ್ಲಿ ಪ್ರೀತಿ, ಮುಖದಲ್ಲಿ ಮುಗುಳ್ನಗೆ ಇರಲಿ ಎಂದು ಖ್ಯಾತ ಮಾನಸಿಕ ಆರೋಗ್ಯ ತಜ್ಞ, ಲೇಖಕ ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.
ಬುಧವಾರ ಸಂಜೆ ಇಲ್ಲಿನ ಸಿದ್ಧಗಂಗಾ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮ-2024-25, ಶಿಕ್ಷಣ ಶಿಲ್ಪಿ ಡಾ.ಎಂಎಸ್ಎಸ್. ಪ್ರಶಸ್ತಿ ಪ್ರದಾನ, ಎಂಎಸ್‌ಎಸ್ ಕ್ವಿಜ್ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಂಭ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯ ಮರೆಯಾಗಿದೆ. ಅದನ್ನು ಕಾಪಾಡಿಕೊಳ್ಳಬೇಕಿದೆ.ದೊಡ್ಡವರೇ ಶಾಂತಿ ಕದಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಶಾಂತಿ ಕಾಪಾಡಬೇಕಿದೆ ಎಂದು ತಿಳಿಸಿದರು.
ಮಾನಸಿಕ ಒತ್ತಡ ಸೇರಿದಂತೆ ಹಲವು ಕಾರಣಗಳಿಗಾಗಿ ಪ್ರತಿ ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವು ದಾಗಿ ಎನ್‌ಸಿಆರ್ ವರದಿಯೇ ಹೇಳಿದೆ. ಮಕ್ಕಳು ಮಾನಸಿಕವಾಗಿ ಗಟ್ಟಿಯಾಗಬೇಕು. ದೇಹಕ್ಕೆ ಮಾಡುವಷ್ಟೇ ಅಲಂಕಾರ ಮನಸ್ಸಿಗೂ ಅಗತ್ಯವಿದೆ. ಅದು ಪ್ರೀತಿಯಿಂದ ಸಾಧ್ಯ ಎಂದರು.
ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು, ಏಸು ಕ್ರಿಸ್ತ, ಬುದ್ಧ ಹೇಳಿದ್ದೂ ಅದನ್ನೇ ಹೀಗಾಗಿ ಪ್ರತಿಯೊಬ್ಬರಲ್ಲೂ ಪ್ರೀತಿ, ದಯೆ, ಶಾಂತಿ ಇರಬೇಕು. ಗುರು ಹಿರಿಯರನ್ನು, ತಂದೆ-ತಾಯಿಯನ್ನು, ಶಿಕ್ಷಕರನ್ನು, ನೆರೆ ಹೊರೆಯ ವರನ್ನು, ಪ್ರಾಣಿ-ಪಕ್ಷಿಗಳನ್ನು ಪ್ರೀತಿಯಿಂದ ಕಾಣಬೇಕು. ಶಾಂತ ಚಿತ್ತರಾಗಿದ್ದರೆ ಆರೋಗ್ಯ ತಾನಾಗಿಯೇ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರಿಗೂ ಒಂದೇ ಗಾತ್ರದ ಮೆದುಳಿರುತ್ತದೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ದೇಶವು ಸಾಧಕರನ್ನು ನೆನೆಯುತ್ತದೆಯೇ ಹೊರತು, ಶ್ರೀಮಂತರನ್ನಲ್ಲ. ಆದ್ದರಿಂದ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು.
ಕುಟುಂಬಗಳಲ್ಲಿ ಸಾಮರಸ್ಯ ಮರೆಯಾ ಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಚಂದ್ರಶೇಖರ್, ಕುಟುಂಬದ ಸದಸ್ಯರನ್ನು ಪ್ರೀತಿಸಬೇಕು, ಗೌರವಿಸಬೇಕು. ಸರಿ ಪ್ರಮಾಣದ ಪ್ರೀತಿ ಆನಂದದ ತಾಯಿ ಬೇರು ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗೆ ಜೀವನದಲ್ಲಿ ಶಿಸ್ತು ಮುಖ್ಯ. ಹೆತ್ತವರು ಮೊದಲು ಶಿಸ್ತು ರೂಢಿಸಿಕೊಂಡು ಮಕ್ಕಳಿಗೂ ಕಲಿಸಬೇಕು. ಊಟದಲ್ಲಿ, ನಿದ್ರೆಯಲ್ಲಿ, ಜೀವನ ಕ್ರಮದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು .ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ರೂಢಿಸಿಕೊಳ್ಳಬೇಕು. ಸಸ್ಯಹಾರ, ಸಾತ್ವಿಕ ಆಹಾರವೇ ಶ್ರೇಷ್ಠವಾ ದದ್ದು. ಮಾಂಸಹಾರವಾದರೆ ಮಿತವಾಗಿರಬೇಕು ಎಂದು ಹೇಳಿದರು.
ಶಿಕ್ಷಣ ತಜ್ಞ ಕೆ.ಇಮಾಂ ಅವರಿಗೆ ಎಂಎಸ್‌ಎಸ್ ಪ್ರಶಸ್ತಿ ನೀಡಿ ಗೌರವಿಸಲಾ ಯಿತು. ಸಿದ್ಧಗಂಗಾ ಶಾಲೆ (ಸಿಬಿಎಸ್‌ಸಿ) ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೋಜ, ನಿರ್ದೇಶಕ ಡಿ.ಎಸ್. ಜಯಂತ್, ಶ್ರೀ ಸಿದ್ಧಗಂಗಾ ಸ್ಕೂಲ್ ದೈಹಿಕ ಶಿಕ್ಷಕ ರಘು ಹೆಚ್.ಎಸ್., ಸಹ ಶಿಕ್ಷಕ ಮಹೇಶ್ ಎಂ.ಸಿ., ಮತ್ತೋರ್ವ ಸಹ ಶಿಕ್ಷಕ ಪುಟ್ಟಸ್ವಾಮಿ ಎಂ. ಉಪಸ್ಥಿತರಿದ್ದರು.
ಎಂಎಸ್‌ಎಸ್ ಕ್ರೀಡಾ ರತ್ನ ಪ್ರಶಸ್ತಿಯನ್ನು ಅಭಿಷೇಕ್ ಎಂ.ಕೆ. ಹಾಗೂ ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿ ಪ್ರಶಸ್ತಿಯನ್ನು ಕೆ.ಪಿ. ಯಶಸ್ವಿನಿ ಇವರಿಗೆ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ರೇಖಾರಾಣಿ ಕೆ.ಎಸ್. ನಿರೂಪಿಸಿದರು. ಇದಕ್ಕೂ ಮುನ್ನ ಕು.ನಿಹಾರಿಕಾ ಸಂಗಡಿಗರಿಂದ ಸುಗಮ ಸಂಗೀತ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.