ದಾವಣಗೆರೆ, ಡಿ.25- ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬ ವನ್ನು ಕ್ರೈಸ್ತ ಬಾಂಧವರು ಸಡಗರ – ಸಂಭ್ರಮದಿಂದ ಆಚರಿಸಿದರು. ಮನೆಗಳಲ್ಲಿಯೂ ಪುಟ್ಟ ಗೋದಲಿ ನಿರ್ಮಿಸಿ ದೀಪಗಳ ಅಲಂಕಾರ ಮಾಡುವ ಮೂಲಕ ಸಂಭ್ರಮಿಸಿದರು.
ಮನೆಗಳಲ್ಲಿ ಪುಟ್ಟ ಗೋದಲಿ, ದೀಪಗಳ ಅಲಂಕಾರ ಮಾಡಲಾಗಿತ್ತು. ನಕ್ಷತ್ರದ ಆಕೃತಿ ವಿದ್ಯುದ್ದೀಪಗಳು, ಹಬ್ಬಕ್ಕೆ ಶುಭ ಕೋರುವ ಗ್ರೀಟಿಂಗ್‌ಗಳು ಗಮನ ಸೆಳೆದವು. ಬೇಕರಿಗಳಲ್ಲಿ ಕ್ರಿಸ್‌ಮಸ್ ಕೇಕ್‌ಗಳಿಗೆ, ಸಾಂತಾ ಕ್ಲಾಸ್ ಟೋಪಿಗಳಿಗೆ ಬೇಡಿಕೆ ಇತ್ತು.
ಪಿ.ಜೆ. ಬಡಾವಣೆಯ ಸೇಂಟ್ ಥಾಮಸ್ ಚರ್ಚ್ ವಿದ್ಯುತ್ ದೀಪಾ ಲಂಕಾರದೊಂದಿಗೆ ಝಗಮಗಿಸಿತು. ನಿನ್ನೆ ತಡರಾತ್ರಿ ಯೇಸು ಕ್ರಿಸ್ತನ ಜನನದ ವಿಶೇಷ ಗೋದಲಿ ಪೂಜೆ ನೆರವೇರುವುದರೊಂದಿಗೆ ಹಬ್ಬ ಕಳೆಗಟ್ಟಿತು. ಸೇಂಟ್ ಥಾಮಸ್ ಚರ್ಚ್‌ನ ಫಾದರ್ ಬಾಲಯೇಸುವನ್ನು ಗೋದಲಿಗೆ ಹಾಕಿದರು.
ಚರ್ಚ್‌ನ ಹಿಂಬದಿಯಲ್ಲಿ ನಿರ್ಮಿಸಲಾದ ಗೋದಲಿಯ ವೀಕ್ಷಣೆಗೆ ಜನಜಂಗುಳಿ ಹೆಚ್ಚಿತ್ತು. ಇತರೆ ಸಮಾಜದವರೂ ನೆರೆದಿದ್ದರು. ಜನರು ಮಾತೆ ಮರಿಯಮ್ಮನ ಗವಿ ಬಳಿ ಮೇಣದಬತ್ತಿ ಬೆಳಗಿ ನಿವೇದಿಸಿಕೊಂಡರು. ಚರ್ಚ್ ಸುತ್ತಲಿನ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.