ಹರಿಹರ, ಡಿ. 23 – ಮೇಲ್ಮನೆ ಸದಸ್ಯ ಸಿ.ಟಿ. ರವಿ ಅವರನ್ನು ಕಾನೂನು ವಿರುದ್ಧವಾಗಿ ಬಂಧಿಸಿ, ಭಯೋತ್ಪಾದಕರಿಗಿಂತ ಹೆಚ್ಚಿನ ರೀತಿಯಲ್ಲಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ, ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹರೀಶ್, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಕಾಂಗ್ರೆಸ್ ಮುಖಂಡರ ಮಾತಿನಂತೆ ನಡೆದುಕೊಂಡಿದ್ದು, ಜನರು ಇದನ್ನೆಲ್ಲ ಗಮನಿಸಿದ್ದಾರೆ ಎಂದರು.
ವಕ್ಫ್ ಆಸ್ತಿ ವಿಚಾರದಲ್ಲಿ ಭಯವನ್ನು ಹುಟ್ಟಿಸುವುದಕ್ಕೆ ಮುಂದಾಗಿದ್ದು, ಮೊನ್ನೆ ನಡೆದ ಅಧಿವೇಶನದಲ್ಲಿ ಹರಿಹರ ತಾಲ್ಲೂಕಿನಲ್ಲಿ ಎಷ್ಟು ಎಕರೆ ವಕ್ಫ್ ಆಸ್ತಿ ಇದೇ ಎಂಬ ಬಗ್ಗೆ ಮಾಹಿತಿಯನ್ನು ಕೇಳಿದಾಗ 83 ಎಕರೆ ಇದೆ ಎಂದು ಸದನದಲ್ಲಿ ಉತ್ತರ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಬಹುತೇಕ ಬಡಾವಣೆಗಳಲ್ಲಿರುವಂತಹ ಮನೆಗಳು ವಕ್ಫ್ ಆಸ್ತಿಯಾಗಿವೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಲ್ಲಿ ಆಗಿರುವಂತಹ ಲೂಟಿ ವಿಚಾರಗಳನ್ನು ಮರೆ ಮಾಚಲು ಕಾಂಗ್ರೆಸ್ ಪಕ್ಷ ಹೊಸ ಹೊಸ ವಿಚಾರಗಳನ್ನು ಹುಡುಕಿ ಸದನದ ದಾರಿ ತಪ್ಪಿಸುವಂತ ಕೆಲಸಕ್ಕೆ ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಗಟ್ಟ ಲಿಂಗರಾಜ್, ಬಾತಿ ಚಂದ್ರಶೇಖರ್, ಮಹಾಂತೇಶ್ ಕಡಾರನಾಯಕನಹಳ್ಳಿ, ರಾಜು ರೋಖಡೆ, ಉಮೇಶ್ ಗಂಗನಹರಸಿ, ಸನಾವುಲ್ಲಾ, ಮಂಜುನಾಥ್, ಸಂತೋಷ ಗುಡಿಮನಿ, ಪ್ರಭಾಕರ್, ಗುರು, ನಾಗರಾಜ್ ಭಂಡಾರಿ, ಆಟೋ ರಾಜು, ರವಿರಾಜ್, ಆದಿತ್ಯ, ವಿಜಯಕುಮಾರ್, ಮೌನೇಶ್, ರಾಜು ಕಿರೋಜಿ, ಅಂಜಿನಪ್ಪ, ಮಾರುತಿ, ಕರಿಬಸಪ್ಪ, ನಿಂಗನಗೌಡ್ರು, ಕಡ್ಲೆಗುಂದಿ ಮೋಹನ್, ದೇವರಬೆಳಕೇರಿ ಜಗದೀಶ್, ಮೋತಿಲಾಲ್ ಖರೋಜಿ, ರವಿರಾಯ್ಕರ್, ವಿನಾಯಕ ಆರಾಧ್ಯಮಠ, ಶಶಿಧರ್, ಜಿಗಳಿ ಇತರರು ಹಾಜರಿದ್ದರು.