ದಾವಣಗೆರೆ, ಡಿ.23- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿನ ಅಲೆಮಾರಿ ಜನರ ಅಭಿವೃದ್ದಿಗಾಗಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು ಗುರಿಯಷ್ಟು ಸಾಧನೆಯಾಗದಿರುವುದರಿಂದ ಈ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಪ.ಜಾತಿ ಹಾಗೂ ಪ.ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಪ.ಜಾತಿ ಹಾಗೂ ಪ.ಪಂಗಡಕ್ಕೆ ಸೇರಿದ್ದರೂ ಸಹ ಈ ಜನರನ್ನು ಗುರುತಿಸಲು ಸಾಧ್ಯವಾಗದಿರುವುದನ್ನು ಸರ್ಕಾರ ಮನಗಂಡು ಸಮಾಜ ಕಲ್ಯಾಣ ಇಲಾಖೆಯಡಿ ಅಭಿವೃದ್ದಿ ನಿಗಮ ಸ್ಥಾಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು. 2011 ರ ಜನಗಣತಿಯನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿಗಳು 665217 ಮತ್ತು ಪರಿಶಿಷ್ಟ ಪಂಗಡದ 321681 ಮತ್ತು 122388 ಜನಸಂಖ್ಯೆ ಇರುವ 25 ಆದಿವಾಸಿ ಸಮುದಾಯಗಳು ಈ ನಿಗಮದ ವ್ಯಾಪ್ತಿಯಲ್ಲಿ ಬರಲಿವೆ. ಈ ಜನರನ್ನು ಗುರುತಿಸದೇ ಇರುವುದರಿಂದ ಇವರು ಶಿಕ್ಷಣ, ಆರ್ಥಿಕ, ಸಾಮಾಜಿಕವಾಗಿ ದೂರ ಉಳಿಯುವಂತಾಗಿದೆ. ಇನ್ನೂ ಸಹ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದಾರೆ.
ನಿಗಮದ ಅಧ್ಯಕ್ಷಳಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಲೆಮಾರಿಗಳ ಬದುಕನ್ನು ಕಣ್ಣಾರೆ ಪರಿಶೀಲಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಅಲೆಮಾರಿಗಳ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದಲ್ಲಿ ನಿಗಮದ ಸೌಲಭ್ಯ, ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು ಅಧಿಕಾರೇತರ ಐವರು ಸದಸ್ಯರನ್ನು ಅಲೆಮಾರಿ ಜಾತಿಗಳಲ್ಲಿಯೇ ಸರದಿಯನ್ವಯ ಪ್ರತಿ ಎರಡು ವರ್ಷಕ್ಕೊಮ್ಮೆ ನೇಮಕ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಗುರಿಯಂತೆ ಪ್ರಗತಿಯಾಗಿರುವುದಿಲ್ಲ. ಜೊತೆಗೆ ಈ ಜನರಿಗೂ ಸಹ ಯೋಜನೆಗಳ ಅರಿವು ಇಲ್ಲದ ಕಾರಣ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಜನರನ್ನು ಹೆಚ್ಚು ಜಾಗೃತರನ್ನಾಗಿಸುವ ಮೂಲಕ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ವಸತಿ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಅಲೆಮಾರಿ ವಿದ್ಯಾರ್ಥಿಗಳಿಗೆ ಶೇ 10 ರಷ್ಟು ಮೀಸಲಿರಿಸಿ ಪ್ರವೇಶ ಕಲ್ಪಿಸಲು ಆದೇಶವಿದ್ದು ಜನರಿಗೆ ಮಾಹಿತಿ ಕೊರತೆಯ ಕಾರಣ 110 ವಿದ್ಯಾರ್ಥಿಗಳಿಗೆ ಅವಕಾಶ ಇದ್ದರೂ 40 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಡಿಯುಡಿಸಿ ಯೋಜನಾ ನಿರ್ದೇಶಕ ಡಾ. ಮಹಾಂತೇಶ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದಕುಮಾರ್ ಉಪಸ್ಥಿತರಿದ್ದರು.