ರಾ.ಲ. ಕಾನೂನು ಕಾಲೇಜಿನಲ್ಲಿನ `ಕಾನೂನು ನೆರವು-ಅರಿವು’ ಕಾರ್ಯಕ್ರಮದಲ್ಲಿ ರಾಜೇಶ್ವರಿ ಹೆಗಡೆ
ದಾವಣಗೆರೆ, ನ. 10- ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆ ಹೇಳಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರ್.ಎಲ್ ಕಾನೂನು ಮಹಾವಿದ್ಯಾಲಯ, ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಆರ್.ಎಲ್. ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ನಿನ್ನೆ ಹಮ್ಮಿಕೊಂಡಿದ್ದ `ಕಾನೂನು ನೆರವು-ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ನಾಗರಿಕರಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ 1987ರಲ್ಲಿ ಕಾನೂನು ಕಾಯ್ದೆಯನ್ನು ಜಾರಿಗೆ ತರಲಾಯಿತು. ನಂತರ ಹಂತ ಹಂತವಾಗಿ ಬದಲಾವಣೆಯಾಗಿ 1995ರಲ್ಲಿ ಕಾನೂನು ಸೇವಾ
ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ಇದರ ನೆನಪಿಗಾಗಿ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ತಿಳಿಯಬೇಕು ಎಂದು ಹೇಳಿದರು.
ರಾಜ್ಯ ಮಟ್ಟದಿಂದ ಹಿಡಿದು ತಾಲ್ಲೂಕು ಮಟ್ಟದವರೆಗೂ ಕಾನೂನು ಸೇವಾ ಪ್ರಾಧಿಕಾರ ತನ್ನ ಸೇವೆಯನ್ನು ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರು ಉಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು, ಮಕ್ಕಳಿಗೆ, ಶೋಷಿತರಿಗೆ ಪ್ರಾಧಿಕಾರದಲ್ಲಿ ಉಚಿತ ಕಾನೂನಿನ ನೆರವು ಸಿಗಲಿದ್ದು, ಪ್ರಾಧಿಕಾರದಿಂದ ಲೋಕ್ ಅದಾಲತ್ ಆಯೋಜಿಸಿದಾಗ ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ, ಕಾನೂನು ಇಲ್ಲದೆ ದೇಶವನ್ನು ಶಾಂತಿ, ಸೌಹಾರ್ದವಾಗಿ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಕಾನೂನು ವಿದ್ಯಾರ್ಥಿಗಳ ಮೇಲೆ ಸಮಾಜ ಕಟ್ಟುವ ಬಹುದೊಡ್ಡ ಜವಾಬ್ದಾರಿಯಿದೆ ಎಂದರು.
ದೇಶದಲ್ಲಿರುವ ಬಡತನ, ಹಸಿವು, ದೌರ್ಜನ್ಯ ನಿವಾರಣೆ ಮಾಡುವ ಮನೋಭಾವವನ್ನು ಕಾನೂನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬಡವರ, ರೈತರ, ಶೋಷಿತರ ಬಗ್ಗೆ ಯೋಚಿಸುವುದರ ಜೊತೆಗೆ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ
ಡಾ.ಜಿ.ಎಸ್.ಯತೀಶ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ., ಸಹ ಪ್ರಾಧ್ಯಾಪಕರಾದ ಬಸವನಗೌಡ ಪಾಟೀಲ್, ಪ್ರದೀಪ್‌ಕುಮಾರ್, ಪಂಕಜಾ, ವಿದ್ಯಾಧರ ವೇದವರ್ಮ, ಪವನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.