ದಾವಣಗೆರೆ ಕೈಗಾರಿಕೆ, ಐಟಿ ಬಿಟಿ ಹಬ್ ಆಗದಿರುವುದು ದುರದೃಷ್ಟಕರ

ದಾವಣಗೆರೆ ಕೈಗಾರಿಕೆ, ಐಟಿ ಬಿಟಿ ಹಬ್ ಆಗದಿರುವುದು ದುರದೃಷ್ಟಕರ

 

ದಾವಣಗೆರೆ, ನ. 10 – ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯು  ನಿಜವಾಗಿಯೂ ಇಂಡಸ್ಟ್ರಿಯಲ್, ಐಟಿಬಿಟಿ ಹಬ್ ಇಷ್ಟರೊಳಗೆ ಆಗಬೇಕಿತ್ತು. ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಖ್ಯಾತಿ ಹೊಂದಿದ್ದ ಇಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ, ಐಟಿಬಿಟಿ ಇಲ್ಲದಿರುವುದು ದುರದೃಷ್ಟಕರ. ವಿಶ್ವದರ್ಜೆಯ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಬರಲು ಬಿಡುತ್ತಿಲ್ಲ. ಹಾಗಾಗಿ, ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ವಿಷಾದ ವ್ಯಕ್ತಪಡಿಸಿದರು.

ನಗರದ ಯುಬಿಡಿಟಿ ಕಾಲೇಜಿನಲ್ಲಿ ಏರ್ಪಡಿ ಸಿದ್ದ `ಎಲೆಕ್ಟ್ರಾನಿಕ್ ಅಂಡ್ ಇನ್‌ಸ್ಟ್ರುಮೆಂಟೇಶನ್’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ಕಾಟನ್ ಮಿಲ್‌ಗಳು, ಹತ್ತಿ ಮಿಲ್ ಗಳು, ರೈಸ್ ಮಿಲ್‌ಗಳು ಹೆಚ್ಚಾಗಿದ್ದವು. ಆದರೆ, ಇಂದು ಕಡಿಮೆಯಾಗಿವೆ. ಈಗ ಕೆಲ ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್‌ಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ವಿಭಾಗದ ಯಾವ ಕೈಗಾರಿಕೆಗಳೂ ಇಲ್ಲ. ಐಟಿಬಿಟಿ ಬೆಳೆದೇ ಇಲ್ಲ. ಇದು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾದ ತುರ್ತು ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ವಿಶ್ವದಲ್ಲಿನ ಉತ್ಕೃಷ್ಟ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರಯತ್ನ ಪಡಿ. ಒಂದು ವೇಳೆ ಆಗದಿದ್ದರೆ ಇಲ್ಲಿಯೇ ಸಿಗುವ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಂಡು ಕಷ್ಟಪಟ್ಟು ಓದಿ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆ, ಬರುತ್ತಿರುವ ಹೊಸ ಹೊಸ ಟೆಕ್ನಾಲಜಿ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಆಗದು ಎಂದು ಕುಳಿತರೆ ಏನೂ ಆಗುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವೆಂದುಕೊಂಡು ಮುನ್ನಡೆದರೆ ಖಂಡಿತವಾಗಿಯೂ ಆಗಿಯೇ ಆಗುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಮುನ್ನುಗ್ಗಿ ಎಂದು ಕರೆ ನೀಡಿದರು.

ಹೊಸ ಹೊಸ ಸಂಶೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಅವಕಾಶ ಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ವಿನಯ್ ಕುಮಾರ್ ಕಿವಿಮಾತು ಹೇಳಿದರು. ಎಂಜಿನಿಯರಿಂಗ್ ಓದಿದ ಮೇಲೆ ಕೆಲಸ ಸಿಗುತ್ತೋ ಇಲ್ಲವೋ, ಅಂಕ ಎಷ್ಟು ಬರುತ್ತದೆಯೋ ಏನೋ, ಕ್ಯಾಂಪಸ್ ನಲ್ಲಿ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಆ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಕೌಶಲ್ಯ, ಸತತ ಪರಿಶ್ರಮ, ತಿಳಿದುಕೊಳ್ಳುವ ಆಸಕ್ತಿ, ಹುಡುಕುವ ತುಡಿತ, ಉತ್ತಮ ವ್ಯಕ್ತಿತ್ವ ಸೇರಿದಂತೆ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ರಾದ ಡಾ. ಡಿ.ಪಿ. ನಾಗರಾಜಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!