ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಗೆ ಸಮಿತಿ ರಚಿಸಲಿ

ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಗೆ ಸಮಿತಿ ರಚಿಸಲಿ

ಅರ್ಜಿ ಕರೆಯುವ ಪದ್ಧತಿಗೆ ತಿಲಾಂಜಲಿ ಹಾಕುವಂತೆ ತರಳಬಾಳು ಶ್ರೀ ಸಲಹೆ

ಸಿರಿಗೆರೆ, ನ.10- ದೇಶಾದ್ಯಾಂತ ಇಂದು ಅನೇಕ ಕ್ರೌರ್ಯ, ಅಮಾನುಷ ಕೃತ್ಯಗಳು, ದುಶ್ಚಟಗಳು ಹೆಚ್ಚಾಗಿದ್ದು, ಮನುಷ್ಯ ಮನುಷ್ಯನನ್ನೇ ತಿನ್ನುವ ಕಾಲ ಬಂದಿದೆ. ಆದ್ದರಿಂದ ಎಲ್ಲರೂ ಸಕಲ ಜೀವರಾಶಿಗೆ ಲೇಸನ್ನೇ ಬಯಸುವ ನಮ್ಮ ಕೂಡಲ ಸಂಗನ ಶರಣರ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾನುವಾರ ಜರುಗಿದ ತರಳಬಾಳು ನುಡಿಹಬ್ಬ 2024ರ ಮೂರನೇ ದಿನದ `ಮಹಿಳೆ ಮತ್ತು ಯುವಜನತೆ’ ಗೋಷ್ಠಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಳೆಯ ಮಕ್ಕಳು ಖಾಲಿ ಚೀಲಗಳಿದ್ದಂತೆ. ಹಾಗಾಗಿ ಅವರಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಲು ಸಾಧ್ಯ. ಭಾರತ ಸಾಂಸ್ಕೃತಿಕವಾಗಿ ಹಿರಿಮೆ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು. 

ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪುರಸ್ಕೃತ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಕರೆಯುವ ಪದ್ಧತಿಗೆ ತೀಲಾಂಜಲಿ ಹಾಕಿ, ಅದಕ್ಕಾಗಿ ಯೋಗ್ಯ ಸಮಿತಿ ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರ್ಹ, ಯೋಗ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು. ಹೊಸನಗರ ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಮಾತನಾಡಿ, ಭಾರತದಲ್ಲಿ ಸಾಧು ಸಂತರಿಂದ ಭಾರತಕ್ಕೆ ಬೆಲೆ ಬಂದಿದೆ. ಸಂಸ್ಕಾರಯುತ ಶಿಕ್ಷಣ ಇಂದು ಎಲ್ಲಾ ಕಡೆ ಕಡಿಮೆಯಾಗಿದೆ. ಆದರೆ ಇಂದು ಮಠಗಳಿಂದ ಶಿಕ್ಷಣ ಪಡೆದವರಲ್ಲಿ ಸಂಸ್ಕಾರಯುತ ಶಿಕ್ಷಣ, ಶಿಸ್ತು, ರೂಢಿಯಲ್ಲಿದೆ. ಭಾರತದಲ್ಲಿ ವಚನಗಳನ್ನು ತಂತ್ರಾಂಶದಲ್ಲಿ ರೂಪಿಸಿರುವ ಏಕೈಕ ಗುರುಗಳು ಸಿರಿಗೆರೆಯ ಶ್ರೀಗಳು ಎಂದು ಅಭಿಮಾನಪೂರ್ವಕವಾಗಿ ನುಡಿದರು. ದಾವಣಗೆರೆಯ ಕನ್ನಡ ಉಪನ್ಯಾಸಕಿ ಡಾ.ಗೀತಾ ಬಸವರಾಜ್ ಮಾತನಾಡಿ, ಶತ ಶತಮಾನಗಳಿಂದ ಮಹಿಳೆ ಶ್ರೇಷ್ಠಳು, ವಚನಕಾರರು ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಕೌಟುಂಬಿಕ ವಲಯಗಳಲ್ಲಿ ಮಹಿಳೆಯ ಮಹತ್ವ. ಮಹಿಳೆಯು ಬದುಕಿನ ನೇತಾರಳಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಯ ಹಾದಿ ಮೆಚ್ಚುವಂತಹದ್ದು. ಸಾಧನೆಗೆ ಸ್ಪೂರ್ತಿಯೇ ಮಹಿಳೆ. ಪ್ರತಿಯೊಬ್ಬ ಮಹಿಳೆಯಲ್ಲಿ ಚೈತನ್ಯ ಶಕ್ತಿ ಅಡಗಿದೆ. ಅಸಹಾಯಕತೆಯ ಸ್ಥಿತಿಯ ಮಹಿಳೆಯು ಇಂದು ಎಲ್ಲಾ ನಿಲುವುಗಳನ್ನು ದಾಟಿ ಮೆಟ್ಟಿ ನಿಂತಿದ್ದಾಳೆ ಎಂದು ಹೇಳಿದರು.

ಉಡುಪಿಯ ಹಾಸ್ಯ ಭಾಷಣಕಾರ್ತಿ ಸಂಧ್ಯಾಶೆಣೈ ಮಾತನಾಡಿ, ಮೌಲ್ಯಗಳು ಯುವಕರ ರಕ್ತದಲ್ಲಿ ಕರಗತವಾಗಬೇಕು. ಯಾರನ್ನೂ ಅಪಮಾನ ಮಾಡದೇ ಬದುಕುವುದು ಸಾರ್ಥಕ. ಯುವಕರು ಹೊಸತನ, ಹೊಸ ವಿಚಾರಗಳಿಗೆ ಬೆಲೆ ನೀಡಿ ಸಂಸ್ಕಾರಯುತ ಜೀವನ ನಡೆಸಬೇಕಿದೆ ಎಂದು ತಿಳಿಸಿದರು. 

 ಪ್ರಸ್ತುತ ಸಾಲಿನ ರಾಜ್ಯೋತ್ಸವ ಪುರಸ್ಕೃತರೂ, ಸಾಹಿತಿಗಳಾದ ಬಿ.ಟಿ.ಲಲಿತಾನಾಯ್ಕ್ ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್ ಈ ಮೂವರು ವ್ಯಕ್ತಿಗಳ ಆಶಯ ನಮ್ಮ ಜೀವನಕ್ಕೆ ಅತ್ಯಗತ್ಯ. ಗುರುಗಳ ಬಗ್ಗೆ ನಮ್ಮಲ್ಲಿರುವ ಭಯವೇ ನಮ್ಮ ಶಕ್ತಿಯಾಗಿ ಬೆಳೆಯುತ್ತದೆ. ಎಲ್ಲರೂ ಮೌಢ್ಯದಿಂದ ಹೊರಬಂದು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬದುಕಬೇಕಿದೆ ಎಂದರು. 

ತಾಳಿಕೋಟೆಯ ಅಶೋಕ್ ಎಸ್.ಹಂಜಲಿ ಮಾತನಾಡಿ, ಉತ್ಸಾಹದ ಚಿಲುಮೆಯಂತಿರುವ ಯುವಕರು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಯುವಕರು ಗುರುಭಕ್ತಿ, ದೇಶಭಕ್ತಿ, ಶ್ರದ್ಧಾಭಕ್ತಿ ಬೆಳೆಸಿಕೊಂಡು ನಾಡನ್ನು ಕಟ್ಟಬೇಕು. ಯುವಕರು ನಾಡನ್ನು ಬೆಳಗುವ ನಕ್ಷತ್ರಗಳಾಗಬೇಕು. ಜೊತೆಗೆ ಧನಾತ್ಮಕ ಚಿಂತನೆ, ದೇಶಪ್ರೇಮ ಬೆಳೆಸಿಕೊಳ್ಳಬೇಕು. ಯುವಕರಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ಹೇಳಿದರು.

ಹಾಸನ ಹಾಗೂ ಬಳ್ಳಾರಿಯ ಕಸಾಪ ಅಧ್ಯಕ್ಷರಾದ ಎಚ್.ಎಲ್ ಮಲ್ಲೇಶ ಗೌಡ, ನಿಷ್ಠಿ ರುದ್ರಪ್ಪ ಇದ್ದರು.

ಮರೆಯಲಾಗದ ಮಹನೀಯರು ಗೋಷ್ಠಿ

ಮಧ್ಯಾಹ್ನದ ಮರೆಯಲಾಗದ ಮಹನೀಯರು ಗೋಷ್ಠಿಯಲ್ಲಿ ಅಭಿನವ ಚನ್ನಬಸವ ಸ್ವಾಮೀಜಿಯವರು ವೈರಾಗ್ಯನಿಧಿ ಅಕ್ಕಮಹಾದೇವಿ ಬಗ್ಗೆ, ಡಾ.ಮಹಾಂತೇಶ್ ಬಿರಾದಾರ್‌ರವರು ವಚನ ಪಿತಾಮಹ ಫ.ಗು.ಹಳಕಟ್ಟೆಯವರ ಬಗ್ಗೆ, ಅನಂತ ದೇಶಪಾಂಡೆಯವರು  ವರಕವಿ ಬೇಂದ್ರೆ ದರ್ಶನದ ಬಗ್ಗೆ, ಡಾ.ಎಚ್.ಟಿ ಶೈಲಜಾರವರು ಶರಣ ಸಾಹಿತ್ಯ ಚಿಂತಕ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ಬಗ್ಗೆ ವಿಷಯ ಮಂಡಿಸಿದರು. ಧಾರವಾಡ ಮತ್ತು ಚಿಕ್ಕಮಗಳೂರು ಕಸಪಾ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಸೂರ್ಯ ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸಿದ್ದರು.

error: Content is protected !!