ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಗ್ಯಾರಂಟಿ-ಸ್ವಚ್ಛತೆ ನಿರ್ವಹಣೆಗಾಗಿ ಮಾರ್ಷಲ್‌ಗಳ ನಿಯೋಜನೆ: ಮೇಯರ್ ಚಮನ್ ಸಾಬ್

ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಗ್ಯಾರಂಟಿ-ಸ್ವಚ್ಛತೆ ನಿರ್ವಹಣೆಗಾಗಿ  ಮಾರ್ಷಲ್‌ಗಳ ನಿಯೋಜನೆ: ಮೇಯರ್ ಚಮನ್ ಸಾಬ್

ದಾವಣಗೆರೆ, ಅ. 24- ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವಾರ್ಡ್‌ಗಳಲ್ಲೂ ಕಸ ಸಂಗ್ರಹದ ವಾಹನಗಳು ಬಂದರೂ ಸಹ ಕೆಲವರು ರಸ್ತೆ, ಖಾಲಿ ನಿವೇಶ ಸೇರಿದಂತೆ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ಮೇಯರ್ ಕೆ. ಚಮನ್ ಸಾಬ್ ಹೇಳಿದರು. 

ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಲು ಮತ್ತು ನಗರ ಸ್ವಚ್ಛತೆ ಹಿನ್ನೆಲೆಯಲ್ಲಿ ನಿವೃತ್ತ ಯೋಧರನ್ನು `ಮಾರ್ಷಲ್’ ಗಳನ್ನು ಗಸ್ತು ನಿಯೋಜನೆ ಮಾಡಲಾಗುವುದು. 20 ಮಾರ್ಷಲ್‌ಗಳನ್ನು ಪಾಲಿಕೆ ವತಿಯಿಂದ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ರಸ್ತೆಯಲ್ಲಿ ಕಸ ಹಾಕುವವರಿಗೆ ಒಂದು ಬಾರಿಗೆ 500, 2 ನೇ ಬಾರಿಗೆ 1000 ಮತ್ತು 2000 ರೂ. ದಂಡ ವಿಧಿಸಲಾಗುವುದು. ಪಾಲಿಕೆಯಲ್ಲಿ ಇನ್ನೂ 420 ಪೌರ ಕಾರ್ಮಿಕರ ಕೊರತೆ ಇದ್ದು, ಈ ಬಗ್ಗೆ ಇದೇ ದಿನಾಂಕ 29 ರಂದು ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ನೇಮಕಾತಿಗೆ ಒತ್ತಾಯಿಸಲಾಗುವುದು ಎಂದು ಚಮನ್ ಸಾಬ್ ತಿಳಿಸಿದರು.

ನವೆಂಬರ್ ತಿಂಗಳನ್ನು `ಸ್ವಚ್ಛತಾ ಮಾಸ’ ವನ್ನಾಗಿ ಆಚರಿಸಲಾಗುವುದು.  ಪ್ರತಿ ವಾರ್ಡಿನಲ್ಲೂ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುವುದು. ಇದಕ್ಕಾಗಿ ಅಗತ್ಯ ಸಲಕರಣೆ, ವಾಹನಗಳು, ಮಾನವ ಸಂಪನ್ಮೂಲಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಹಾಕುವಂತೆ ಮನೆ ಬಾಗಿಲಿಗೆ ಬಂದ ವಾಹನಗಳಲ್ಲಿ ಹಾಕುವಂತೆ ಪ್ರಚಾರ ಮಾಡುತ್ತಾ ಬಂದಿದ್ದರೂ, ಕೆಲವರು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಹಾಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಇದನ್ನು ತಪ್ಪಿಸಲು ಆರೋಗ್ಯ ನಿರೀಕ್ಷಕರು ಮನೆಬಾಗಿಲಿಗೆ ಬಂದು ದಂಡ ವಿಧಿಸಿ, ಕಸ ಹಾಕಿದವರ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದರು.

ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕವನ್ನು ಪಾಲಿಕೆಗೆ ಪಾವತಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ಪಾವತಿಸದೇ ಇದ್ದಲ್ಲಿ ಪಾಲಿಕೆಯ ಅಧಿಕಾರಿಗಳೇ ಭೇಟಿ ನೀಡಿ ಸ್ಥಳದಲ್ಲಿಯೇ ದಂಡದೊಂದಿಗೆ ತೆರಿಗೆ, ಶುಲ್ಕ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

error: Content is protected !!