ಬೆಳೆ ವಿಮೆ ಬಾಕಿ; ಕಂಪನಿಯ ಕಳ್ಳ ಮಾರ್ಗದ ಯತ್ನ ಕೈಗೂಡದು – ರೈತ ಮುಖಂಡ ರವೀಂದ್ರಗೌಡ ಪಾಟೀಲ ಎಚ್ಚರಿಕೆ

ಬೆಳೆ ವಿಮೆ ಬಾಕಿ; ಕಂಪನಿಯ ಕಳ್ಳ ಮಾರ್ಗದ ಯತ್ನ ಕೈಗೂಡದು – ರೈತ ಮುಖಂಡ ರವೀಂದ್ರಗೌಡ ಪಾಟೀಲ ಎಚ್ಚರಿಕೆ

ರಾಣೇಬೆನ್ನೂರು, ಅ.24-  ಕಳೆದ ಸಾಲಿನಲ್ಲಿ ಅದೂ ಬರಗಾಲವೆಂದು ಘೋಷಿಸಿದಾಗಲೂ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ನಿಯಮಾವಳಿ ಪ್ರಕಾರ ಬೆಳೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ನೀಡದೇ  ರಿಲಯನ್ಸ್ ಇನ್ಸೂರೆನ್ಸ್ ಕಂಪನಿ ಈಗ ಕಳ್ಳ ಮಾರ್ಗಗಳನ್ನು ಹುಡುಕಿ ಶೇ. 75 ಬಾಕಿ ಹಣ ಜಮಾ ಮಾಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ರೈತರನ್ನು ರೊಚ್ಚಿ ಗೆಬ್ಬಿಸಿದೆ. ಕಂಪನಿಯ ಹುನ್ನಾರ ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ  ಎಂದು   ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ  ಎಚ್ಚರಿಸಿದ್ದಾರೆ. ಬೆಳೆ ವಿಮೆ ತಾರತಮ್ಯ ನೀತಿ ಖಂಡಿಸಿ ನ್ಯಾಯಕ್ಕಾಗಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರತಿಯಂತೆ    ಹೆಡಿಯಾಲ ಗ್ರಾಮ ಪಂಚಾಯತಿಗೆ ಬೀಗ ಜಡಿದು,   ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯನ್ನು ಹೆಡಿಯಾಲ ಹತ್ತಿರ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಜಿಲ್ಲಾಡಳಿತ ಈ ಸಂಬಂಧ ಮೈಚಳಿ ಬಿಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಜಿಲ್ಲಾಡಳಿತ ರೈತರ ಈ ಸಮಸ್ಯೆಯನ್ನು ತುರ್ತು ಇತ್ಯರ್ಥಪಡಿಸದಿದ್ದರೆ ಶಿಗ್ಗಾಂವ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಬಹಿಷ್ಕರಿಸಿ, ಚುನಾವಣಾ ಕಾರ್ಯಕ್ಕೆ ಅಡೆತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಕಂದಾಯ ಇಲಾಖೆಯ ಅಶೋಕ ಅರಳೇಶ್ವರ, ಕೃಷಿ ಇಲಾಖೆಯ ಎಂ. ಅರವಿಂದ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. 

ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶ ಮಡ್ಲೂರ್, ಲಕ್ಷ್ಮಣ ಚೌಟಿ, ಸುರೇಶ ಚಪ್ಪರದಹಳ್ಳಿ, ಶಿವಕುಮಾರ ಜ್ಯೋತಿ, ಹೇಮಪ್ಪ ಮಾರೇರ, ಮಹೇಶಪ್ಪ ಮಾಸಣಗಿ, ಈರಪ್ಪ ಗಂಗಣ್ಣನವರ, ಬಸಪ್ಪ ಹೊಳಲವರ, ನಾಗಪ್ಪ ಅರಳಿ, ಬಸನಗೌಡ ಪಾಟೀಲ, ಮಹೇಶಪ್ಪ ಮಳಿಯಪ್ಪನವರ, ವಿರುಪಾಕ್ಷಪ್ಪ ಅರಳಿ, ಶಂಭು ಮಾಸಣಗಿ  ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!