ಹರಿಹರ, ಅ.24- ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ, ವಾಹನ ಸವಾರರು ನಿರ್ಭಯ ವಾಗಿ ಓಡಾಡುವುದಕ್ಕೆ ಪರದಾಡುವಂತಾಗಿದೆ.
ಗಾಂಧಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ಆಟೋ ನಿಲ್ದಾಣ ಪಕ್ಕದ ರಸ್ತೆ, ಹರಪನಹಳ್ಳಿ ರಸ್ತೆ, ಸೇರಿದಂತೆ ಇತರೆ ರಸ್ತೆಗಳ ಗುಂಡಿಗಳು ವಾಹನ ಸವಾರರನ್ನು ಕಂಗೆಡಿಸಿವೆ.
ಕಳೆದ ಒಂದು ವಾರದಿಂದ ಧಾರಾಕಾರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಗುಂಡಿಗಳು ಮತ್ತಷ್ಟು ದೊಡ್ಡದಾಗುತ್ತಿದ್ದು, ವಾಹನ ಸವಾರರು ಗುಂಡಿಗಳಿಗೆ ಬಿದ್ದು, ಕೈ-ಕಾಲುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ರುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ತಾಲ್ಲೂಕಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ಸರ್ಕಾರ 32 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸಿ, ದುರಸ್ತಿ ಪಡಿಸಲು ಮುಂದಾಗಬೇಕಿದೆ.
ಈ ವೇಳೆ ಮಲನಾಯಕನಹಳ್ಳಿ ಅಂಬರೀಶ್ ಮಾತನಾಡಿ, ನಗರದಲ್ಲಿ ಯಾವುದೇ ರಸ್ತೆಗೆ ಹೋದರು ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಇರುವುದರಿಂದ ಹಗಲಿನಲ್ಲಿಯೇ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಇನ್ನು ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದೇ ಇರುವ ಸಮಯದಲ್ಲಿ ಓಡಾಡುವಾಗ ಅಪ್ಪಿತಪ್ಪಿ ಗುಂಡಿಯಲ್ಲಿ ಬಿದ್ದರೆ, ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬರಬಹುದು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಸಹ ಇದೇ ರೀತಿಯ ಗುಂಡಿಗಳು ಇರುವುದರಿಂದ ವಾಹನಗಳು ಓಡಾಡುವುದಕ್ಕೆ ಸಾಕಷ್ಟು ತೊಂದರೆಗಳಾಗುತ್ತವೆ ಎಂದು ಹೇಳಿದರು.