ದಾವಣಗೆರೆ, ಅ.24- ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ ದೇಶದ ಲ್ಲಿಯೇ ಹೆಸರು ಮಾಡಿದೆ. ಇಲ್ಲಿನ ಕಲಾ ವಿದ್ಯಾರ್ಥಿಗಳ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಬೆಂಗಳೂರಿನ ಆರ್ ಮತ್ತು ಟಿಡಿಸಿ ಸೆರಾಮಿಕ್ ವಿಭಾಗದ ನಿವೃತ್ತ ಉಸ್ತುವಾರಿ ಉಲ್ಲಾಸ್ಕರ್ ಡೇ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾ ಲಯದ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಲಾ ವಿದ್ಯಾರ್ಥಿಗಳು ಸದಾ ಕ್ರಿಯಾ ಶೀಲತೆ ಮತ್ತು ಉತ್ಸಾಹದಿಂದ ಅಧ್ಯಯನ ಮಾಡಿದರೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿದೆ ಎಂದು ಹೇಳಿದರು.
ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವವಿದ್ಯಾಲಯ 60 ವರ್ಷ ಗಳನ್ನು ಪೂರೈಸಿರುವುದು ಸಂತೋಷದ ವಿಚಾರ. ಕಲೆ, ಸಾಹಿತ್ಯಕ್ಕೆ 19-20 ನೇ ಶತಮಾನದ ರಾಜ, ಮಹಾರಾಜರ ಕಾಲದಲ್ಲಿ ಸಿಗುತ್ತಿದ್ದ ಪ್ರೋತ್ಸಾಹಗಳನ್ನು ಇಂದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ 21 ನೇ ಶತಮಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದುವ ರೆಸಿಕೊಂಡು ಹೋಗುತ್ತಿವೆ ಎಂದರು.
ಜಗತ್ತಿನ ಯಾವುದೇ ಮೂಲೆಯಲ್ಲಿ ದ್ದರೂ ಮಹಾವಿದ್ಯಾಲಯ ಮತ್ತು ಗುರುಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದ ಅವರು, ಹಳೆಯ ವಿದ್ಯಾರ್ಥಿಗಳು ಈ ಕಾಲೇಜಿಗೆ ಸಾಧನೆಯೊಂದಿಗೆ ಭೇಟಿ ನೀಡಿದಾಗ ಕಲಿಸಿದ ಗುರುಗಳಿಗೆ ಆಗುವ ಆನಂದ ದೊಡ್ಡದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ್ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ವಲ್ಲೇಪುರೆ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಧುಶ್ರೀ ಉಪಸ್ಥಿತರಿದ್ದರು.